ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಗೆ ಬರುವ ಯಲ್ಲಾಪುರ ತಾಲೂಕಿನ ಬಾಳೆಗದ್ದೆ ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ ನಾಯಕ ಅವರನ್ನು ವಿವಿಧ ಕಾರಣ ನೀಡಿ ಯೆಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ವರದಿ ಆಧರಿಸಿ ಶಿರಸಿ ಶೈಕ್ಷಣಿಕ ಜಿಲ್ಲೆ ಡಿ.ಡಿ.ಪಿ.ಐ ಪಾರಿ ಬಸವರಾಜು ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ತವ್ಯದ ಅವಧಿಯಲ್ಲಿ ಮದ್ಯಪಾನ, ಶಾಲೆ ಒಳಗೆ ವ್ಯಸನಿಗಳ ಪ್ರವೇಶಕ್ಕೆ ಅವಕಾಶ, ಅನಧಿಕೃತ ಗೈರು ಹಾಜರಿ ಕಾರಣದಿಂದ ಯಲ್ಲಾಪುರ ಬಾಳೆಗದ್ದೆ ಶಾಲೆ ಸಹ ಶಿಕ್ಷಕ ಪ್ರಕಾಶ ನಾಯಕ ಅವರು ಸೇವೆಯಿಂದ ಅಮಾನತಾಗಿದ್ದಾರೆ.
ಪ್ರಕಾಶ ನಾಯಕ ಅವರು ಈ ಹಿಂದೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಮತ್ತು ಯುವಜನ ಸೇವಾ ಕ್ರೀಡಾಧಿಕಾರಿಯಾಗಿ ಸಹ ಕೆಲಸ ನಿರ್ವಹಿಸಿದ್ದರು. ಆ ಅವಧಿಯಲ್ಲಿ ಅವರು ಎಲ್ಲರ ಜೊತೆ ಅನ್ಯೋನ್ಯವಾಗಿದ್ದರು. ನಂತರ ಪ್ರಕಾಶ ನಾಯಕ ಅವರನ್ನು ಉಪಳೇಶ್ವರ ಬಳಿಯ ಬಾಳೆಗದ್ದೆ ಶಾಲೆಗೆ ಸಹ ಶಿಕ್ಷಕರಾಗಿ ಕಾರ್ಯ ಕ್ಕೆ ಶಿಕ್ಷಣ ಇಲಾಖೆ ಕಳುಹಿಸಿತ್ತು.
ನಂದೂಳ್ಳಿಯ ಸಮನ್ವಯ ಸಂಪನ್ಮೂಲ ಅಧಿಕಾರಿಗಳು ಮೂರು ಬಾರಿ ಬಾಳೆಗದ್ದೆ ಶಾಲೆಗೆ ಭೇಟಿ ನೀಡಿದಾಗಲೂ ಅಲ್ಲಿ ಶಿಕ್ಷಕ ಪ್ರಕಾಶ ನಾಯಕ ಇರಲಿಲ್ಲ. ಅಧಿಕೃತ ರಜೆಯನ್ನು ಸಹ ಪಡೆದಿರಲಿಲ್ಲ. ಶಾಲಾ ಎಸ್ಡಿಎಂಸಿ ಅಧ್ಯಕ್ಷರು ಸಹ ಪ್ರಕಾಶ ನಾಯಕ ಅವರು `ಮದ್ಯಪಾನ ಮಾಡಿ ಶಾಲೆಗೆ ಬರುತ್ತಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. `ತಮ್ಮೊಂದಿಗೆ ಇತರೆ ಕುಡುಕರನ್ನು ಸಹ ಅವರು ಶಾಲೆಗೆ ಕರೆತರುತ್ತಾರೆ’ ಎಂದು ಆಪಾದಿಸಿದ್ದರು. ಇದರಿಂದ ಶಾಲಾ ವಾತಾವರಣ ಹದಗೆಟ್ಟಿರುವ ಬಗ್ಗೆ ಎಸ್ಡಿಎಂಸಿ ಅಧ್ಯಕ್ಷರು ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದರು. ಅಡುಗೆ ಸಿಬ್ಬಂದಿ ಹಾಗೂ ಮಕ್ಕಳ ಮೇಲೆ ದುಷ್ಪರಿಣಾಮವಾಗುತ್ತಿರುವ ಬಗ್ಗೆ ವಿವರಿಸಿದ್ದರು.
ಶಾಲೆಗೆ ಅನಿರೀಕ್ಷಿತವಾಗಿ ಸಂಪನ್ಮೂಲ ವ್ಯಕ್ತಿ ಭೇಟಿ ನೀಡಿದಾಗ ಹಾಜರಾತಿಯಲ್ಲಿ ಸಹಿ ಹಾಕಿ, ಅನಧಿಕೃತ ಗೈರಾಗಿರುವುದು ಗಮನಕ್ಕೆ ಬಂದಿತ್ತು. ದುಶ್ಚಟಗಳಿಗೆ ದಾಸರಾಗಿರುವ ಶಿಕ್ಷಕರು ಶಾಲೆಗೆ ಬಂದು ಸಹಿ ಮಾಡಿ ಪಾಠ ಮಾಡದೇ ಮರಳುತ್ತಿರುವ ಬಗ್ಗೆ ಸಂಪನ್ಮೂಲ ವ್ಯಕ್ತಿ ಸಹ ವರದಿ ಸಲ್ಲಿಸಿದ್ದರು. ಇದರಿಂದ ಶೈಕ್ಷಣಿಕ ಗುಣಮಟ್ಟ ಕುಸಿದಿದ್ದು, ಶಾಲಾ ವಾತಾವರಣವೂ ಹಾಳಾದ ಬಗ್ಗೆ ಊರಿನವರು ಕಳವಳ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಶಿಕ್ಷಣ ಇಲಾಖೆ ಪ್ರಕಾಶ ನಾಯಕ ಅವರಿಗೆ ಶಿಕ್ಷಣಾಧಿಕಾರಿ ಕಚೇರಿಯಿಂದ ಅಗಸ್ಟ 23ರಂದು ನೋಟಿಸ್ ನೀಡಿದ್ದು, ನವೆಂಬರ್ 21ರಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಾರಿ ಬಸವರಾಜ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ನ 21ರಂದೇ ಅಮಾನತು ಆದೇಶವಾಗಿದ್ದರೂ ಈ ವಿಷಯ ಹೊರ ಬಾರದಂತೆ ಕೆಲವು ಕಾಣದ ಕೈಗಳ ಸಹಾಯದಿಂದ ರಹಸ್ಯ ಕಾಪಾಡಿಕೊಳ್ಳಲಾಗಿತ್ತು.