ಭಟ್ಕಳ : ಉತ್ತರ ಕನ್ನಡ ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವ ಸನ್ಮಾನದಲ್ಲಿ ಭಟ್ಕಳದ ಎಂ. ಆರ್. ನಾಯ್ಕ ಅವರನ್ನು ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು. ಎಂ. ಆರ್. ನಾಯ್ಕ ಅವರು
ವಿಜಯಾ ಬ್ಯಾಂಕಿನ ಚೀಫ್ ಮ್ಯಾನೇಜರ್ ಆಗಿ ದೇಶದ ಉದ್ದಗಲಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ
ವ್ಯಕ್ತಿತ್ವ ವಿಕಸನ ತರಬೇತಿ, ಬ್ಯಾಂಕಿಂಗ್ ಪರೀಕ್ಷಾ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಬ್ಯಾಂಕಿಂಗ್ ಪರೀಕ್ಷಾ ತರಬೇತಿಯನ್ನು ಆರಂಭಿಸಿ ನೂರಾರು ಉದ್ಯೋಗಾರ್ಥಿಗಳಿಗೆ ತರಬೇತಿ ನೀಡಿ ಅನೇಕ ವ್ಯಕ್ತಿಗಳು ಇವರಿಂದಾಗಿ ಬ್ಯಾಂಕಿಂಗ್ ಉದ್ಯೋಗಕ್ಕೆ ಸೇರಿದ್ದಾರೆ. ಸರ್ಕಾರಿ ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸಾಲುಮರದ ತಿಮ್ಮಕ್ಕ ಪಾರ್ಕಿನ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಸಹಸ್ರಾರು ಗಿಡನಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಭಟ್ಕಳ ನಗರಸಭೆಯ ಸ್ವಚ್ಛ ಭಾರತ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿ ಸೇವೆಯಲ್ಲಿ ತೊಡಿಗಿಸಿಕೊಂಡಿದ್ದಾರೆ.
ತಾ.ಪಂ. ನ ಲೀಡ್ ಬ್ಯಾಂಕನ ಫೈನಾನ್ಶಿಯಲ್ ಲಿಟರಸಿ ಕೌನ್ಸಿಲರ್ ಆಗಿ ಸ್ವಸಹಾಯ ಸಂಘಗಳಿಗೆ ತರಬೇತಿ ನೀಡಿ ಪ್ರಧಾನಮಂತ್ರಿ ಸ್ವ ಉದ್ಯೋಗ ಯೋಜನೆ ಸಾಲ ಸೌಲಭ್ಯ ಪಡೆಯಲು ಸಹಕರಿಸಿ ತರಬೇತಿ ನೀಡಿದ್ದಾರೆ.
500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಬ್ಯಾಂಕಿನಿಂದ ಶೈಕ್ಷಣಿಕ ಸಾಲ ಪಡೆಯಲು ಮಾರ್ಗದರ್ಶನ ನೀಡಿ ಸಹಾಯ ಮಾಡಿದ್ದಾರೆ. ಪ್ರಧಾನಮಂತ್ರಿ ಜೀವನ ವಿಮಾ ಯೋಜನೆ ಪ್ರಧಾಮಂತ್ರಿ ಸ್ವಾಸ್ತ್ಯ ವಿಮಾ ಯೋಜನೆ, ಅಟಲ್ ಪೆನ್ಶನ್ ಯೋಜನೆ ಯ ಕುರಿತ ಮಾಹಿತಿ ಕಾರ್ಯಾಗಾರ ನೀಡಿ ಸಾವಿರಾರು ಜನರಿಗೆ ಅದರ ಪ್ರಯೋಜನ ಸಿಗುವಂತೆ ಮಾಡಿದ್ದಾರೆ. ಭಟ್ಕಳದ ಬಂದರ ರಸ್ತೆಯಲ್ಲಿರುವ ಹಿಂದೂ ರುದ್ರ ಭೂಮಿಯ ನವೀಕರಣದ ಸಮಿತಿಯ ಅಧ್ಯಕ್ಷರಾಗಿ ೨೫ ಲಕ್ಷ ರೂ. ವೆಚ್ಛದಲ್ಲಿ ಅತ್ಯಾಧುನಿಕ ರುದ್ರಭೂಮಿಯ ಪುನರ್ನಿರ್ಮಾಣದಲ್ಲಿ ನೇತ್ರತ್ವ ವಹಿಸಿದ್ದಾರೆ.
ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇಗುಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ಬಂದರ್ ರಸ್ತೆಯಲ್ಲಿರುವ ನಾಗಮಹಾಸತಿ ದೇವಸ್ಥಾನ ಬಂದರ ರಸ್ತೆ, ದೇವಸ್ಥಾನ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಭಟ್ಕಳ ಅರ್ಬನ ಬ್ಯಾಂಕ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಎಂ. ಆರ್. ನಾಯ್ಕ ಅವರ ಸಮಾಜಮುಖಿ ಸೇವೆಯನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ದಲ್ಲಿ ಸನ್ಮಾನಿಸಿ ಗೌರವಿಸಿರುವುದು ಎಲ್ಲರ ಸಂತಸಕ್ಕೆ ಕಾರಣವಾಗಿದೆ. 73ರ ಇಳಿ ವಯಸ್ಸಿನಲ್ಲಿಯೂ ಸಮಾಜಸೇವೆ ಮಾತ್ರವಲ್ಲದೆ ಹಲವಾರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಂ. ಆರ್. ನಾಯ್ಕ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ.