ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ಹಿನ್ನಲೆಯು ಜಿಲ್ಲೆಯ ಅಭಿವೃದ್ದಿ ಮತ್ತು ಭೂಮಿ ಹಕ್ಕಿನ ಪ್ರಗತಿ ಕುಂಠಿತಕ್ಕೆ ಪ್ರಬಲ ಕಾರಣವಾಗಿದ್ದು, ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ‘ಗುಡ್ಡಗಾಡು ಜಿಲ್ಲೆ’ ಘೋಷಣೆ ಮೂಲಕ ಸಾಮಾಜಿಕ, ಶೈಕ್ಷಣೀಕ ಮತ್ತು ಸರ್ವಾಗೀಕರಣ ಅಭಿವೃದ್ದಿ ಸಾಧ್ಯ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಡಿ.೭ ರಂದು ಮುಂಡಗೋಡ ತಾಲೂಕಿನ ಲೋಯಲ್ ವಿಕಾಸ ಕೇಂದ್ರ, ಸಭಾಂಗಣದಲ್ಲಿ ಬುಡಕಟ್ಟು ಮತ್ತು ತಳ ಸಮುದಾಯಗಳ ಒಕ್ಕೂಟ ಮತ್ತು ಲೋಯಲ್ ವಿಕಾಸ ಕೇಂದ್ರ ಸಹಯೋಗದೊಂದಿಗೆ ಸಾಮಾಜಿಕ ಸುರಕ್ಷತೆಯತ್ತ ಬುಡಕಟ್ಟು ಮತ್ತು ತಳ ಸಮುದಾಯಗಳು ಎಂಬ ಶಿರೋನಾಮೆಯ ಅಡಿಯಲ್ಲಿ ‘ಸಾಂಸ್ಕೃತಿಕ ಕಲಾ ಮೇಳ-೨೦೨೪’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಜಿಲ್ಲೆಯ ಶೇ. ೮೦ ರಷ್ಟು ಅರಣ್ಯ ಮತ್ತು ಶೇ.೧೦ ರಷ್ಟು ಗುಡ್ಡಗಾಡು, ತಗ್ಗು, ಬೆಟ್ಟ, ಜಲಪಾತ, ಸಯ್ಯಾದ್ರಿ ಪರ್ವತದಿಂದ ಭೌಗೋಳಿಕವಾಗಿ ಹೀಗೆ ಒಟ್ಟು ಶೇ.೯೦ ರಷ್ಟು ಗುಡ್ಡಗಾಡು ಪ್ರದೇಶ ಆವೃತ್ತವಾಗಿದೆ. ಜಿಲ್ಲೆಯ ಜನರ ಸಂಖ್ಯೆಯಲ್ಲಿ ಶೇ.೪೦ ರಷ್ಟು ಅರಣ್ಯವಾಸಿಗಳು ಇರುವರು. ಜಿಲ್ಲೆಯ ಜನರ ಜನ ಜೀವನ, ಸಂಸ್ಕೃತಿ, ಆಹಾರ, ಪರಿಸರಗಳು ನೈಸರ್ಗಿಕವಾಗಿ ಗುಡ್ಡಗಾಡು ಜಿಲ್ಲೆ ಎಂದು ಘೋಷಿಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಉದ್ಘಾಟನಾ ಸಹಾಯಕ ಆಯುಕ್ತರಾದ ಕೆ.ವಿ ಕಾವ್ಯರಾಣಿ, ಅಧ್ಯಕ್ಷತೆ ಶ್ರೀಮತಿ ಸರೋಜಾ ಚವ್ಹಾಣ, ತಹಶೀಲ್ದಾರರು ಶ್ರೀ ಶಂಕರ ಗೌಡಿ, ಮಿಸ್ ಡೀನಾ ಝೇವಿಯರ್, ಶ್ರೀಮತಿ ಜುಲಿಯಾನ ಸಿದ್ಧಿ, ಅನಿತ ಡಿಸೋಜಾ, ಸಂಚಾಲಕರು ಸುಭಾಷ ವಡ್ಡರ್, ಅನಿಲ್ ಡಿಸೋಜಾ ಉಪಸ್ಥಿತರಿದ್ದರು.
೨-೩ ಜಿಲ್ಲೆ ಅವಶ್ಯವಿಲ್ಲ:
ಅಭಿವೃದ್ದಿ ನೆಪದಲ್ಲಿಯೇ ಉತ್ತರ ಕನ್ನಡ ೨-೩ ಜಿಲ್ಲೆಯಾಗಿ ವಿಭಜನೆಯ ಅವಶ್ಯವಿಲ್ಲ. ಜಿಲ್ಲೆಯ ಪರಿಸರಕ್ಕೆ ಸಮತೋಲನ ದೃಷ್ಟಿಯಿಂದ ಗುಡ್ಡಗಾಡು ಜಿಲ್ಲೆ ಘೋಷಣೆ ಮತ್ತು ಕಾರ್ಯ ಹೆಚ್ಚು ಪ್ರಾಮುಖ್ಯತೆ ಪಡೆಯುವದು ಎಂದು ಹೋರಾಟಗಾರ ರವೀಂದ್ರ ನಾಯ್ಕ ಉಲ್ಲೇಖಿಸಿದರು.