ಯಲ್ಲಾಪುರ: ಬೈಕಿಗೆ ಬಸ್ಸು ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದು, ಒಬ್ಬರ ಕೈ-ಕಾಲುಗಳಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಹೆಲ್ಮೆಟ್ ಸಹ ಧರಿಸದೇ ಬೈಕಿನಲ್ಲಿ ಮೂವರು ಸಂಚರಿಸಿರುವುದು ಹಾಗೂ ಬಸ್ಸು ಚಾಲಕನ ದುಡುಕುತನ ಈ ಅಪಘಾತಕ್ಕೆ ಕಾರಣ.
ಡಿ 28ರ ರಾತ್ರಿ 9.30ಕ್ಕೆ ಯಲ್ಲಾಪುರದ ಬಿಸಗೋಡು ಕ್ರಾಸಿನ ಬಳಿ ಬೈಕ್ ಹಾಗೂ ಬಸ್ಸಿನ ನಡುವೆ ಡಿಕ್ಕಿಯಾಗಿದೆ. ಬೈಕಿಗೆ ಬಸ್ಸು ಗುದ್ದಿದ ರಭಸಕ್ಕೆ ಬೈಕಿನಲ್ಲಿ ಸಂಚರಿಸುತ್ತಿದ್ದ 6ನೇ ತರಗತಿ ಬಾಲಕನ ತಲೆ ಒಡೆದಿದೆ. ಮಹಿಳೆಯೊಬ್ಬರ ಮೆದುಳು ತಲೆಯಿಂದ ಹೊರ ಬಂದು ಅವರು ಸಾವನಪ್ಪಿದ್ದಾರೆ. ಯಲ್ಲಾಪುರದ ಉದ್ಯಮನಗರದ ಕಸ್ತೂರಿ ಬ್ಯಾಡಗಿ (45) ಹಾಗೂ ಕೋಮಲ ಬೋವಿವಡ್ಡರ್ (12) ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆ ವೇಗವಾಗಿ ಬಸ್ಸು ಓಡಿಸುತ್ತಿದ್ದ ಸಂಗಯ್ಯ ದೊಡ್ಡವಾಡ ಬಸ್ಸು ಬೈಕಿಗೆ ಗುದ್ದಿದ ನಂತರವೂ ತಮ್ಮ ವಾಹನ ಚಲಿಸಿದ್ದಾರೆ. ಹೀಗಾಗಿ ಅಪಘಾತದಿಂದ ಹೆದ್ದಾರಿ ಮೇಲೆ ಬಿದ್ದಿದ್ದ ಕಸ್ತೂರಿ ಹಾಗೂ ಕೋಮಲ್ ಮೇಲೆ ಬಸ್ಸಿನ ಹಿಂದಿನ ಚಕ್ರ ಹತ್ತಿದೆ. ಬೈಕ್ ಓಡಿಸುತ್ತಿದ್ದ ಬಿಸಗೋಡು ಕ್ರಾಸಿನ ಬಸವರಾಜ ಬ್ಯಾಡಗಿ ಅವರಿಗೂ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಬಸವರಾಜ ಬ್ಯಾಡಗಿ ಅವರ ಕೈ – ಕಾಲುಗಳಿಗೆ ಗಾಯವಾಗಿದೆ.
ಅಪಘಾತದ ವಿಷಯ ತಿಳಿದ ತಕ್ಷಣ ಯಲ್ಲಾಪುರ ಪೊಲೀಸ್ ಠಾಣೆಯ ಪಿಐ ರಮೇಶ ಹಾನಾಪುರ ಸ್ಥಳಕ್ಕೆ ದೌಡಾಯಿಸಿದರು. ಪಿಎಸ್ಐ ಸಿದ್ದಪ್ಪ ಗುಡಿ, ನಸ್ರೀನ್ತಾಜ್ ಚಟ್ಟರಗಿ, ಶೇಡ್ ಜಿ ಚೌಹಾಣ್ ಸೇರಿ ಟ್ರಾಫಿಕ್ ಸಮಸ್ಯೆ ಆಗದಂತೆ ಮುನ್ನಚ್ಚರಿಕೆವಹಿಸಿದರು. ಶಿರಸಿ ಡಿವೈಎಸ್ಪಿ ಗಣೇಶ ಕೆ ಎಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಬೇಡ್ಕರ ನಗರದಲ್ಲಿ ಸೆಂಟ್ರಿAಗ್ ಕೆಲಸ ಮಾಡುವ ರೇವಣಸಿದ್ದಪ್ಪ ಉಣಕಲ್ ಪೊಲೀಸ್ ಪ್ರಕರಣ ದಾಖಲಿಸಿದರು.