ಹೊನ್ನಾವರ-ಗರ್ಭಿಣಿ ಹಸುವಿನ ರುಂಡ ತುಂಡರಿಸಿ ಹೊಟ್ಟೆಯೊಳಗಿದ್ದ ಕರುವನ್ನು ತೆಗೆದು ಬಿಸಾಡಿದ್ದ ದುಷ್ಟರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆ ಮೂವರನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯವೂ ನ್ಯಾಯಾಂಗ ಬಂಧನ ವಿಧಿಸಿದೆ.
ಹೊನ್ನಾವರದ ಸಾಲ್ಕೋಡ ಬಳಿಯ ಕೊಂಡಾಕುಳಿ ಕೃಷ್ಣ ಆಚಾರಿ ಅವರು ಸಾಕಿದ್ದ ಹಸು ಶನಿವಾರ ಕಾಡಿಗೆ ಹೋಗಿತ್ತು. ಮೇಯುತ್ತಿದ್ದ ಹಸುವನ್ನು ಹಿಡಿದ ಮೂವರು ಅದರ ರುಂಡ ಹಾಗೂ ಕಾಲು ಕತ್ತರಿಸಿದ್ದರು. ಹೊಟ್ಟೆಯೊಳಗಿದ್ದ ಕರುವನ್ನು ಬಿಸಾಡಿ ಮಾಂಸ ತೆಗೆದುಕೊಂಡು ಹೋಗಿದ್ದರು.
ಕೊಟ್ಟಿಗೆಗೆ ಮರಳದ ಹಸು ಹುಡುಕಿ ಹೊರಟ ಕೃಷ್ಣ ಆಚಾರಿ ಅವರಿಗೆ ಭಾನುವಾರ ಚಿತ್ರಹಿಂಸೆಯಿ0ದ ನಲುಗಿ ಸಾವನಪ್ಪಿದ ಆಕಳು ಕಂಡಿತ್ತು. ವಿಷಯ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ ಜಗದೀಶ ಅಲ್ಲಿ ಭೇಟಿ ನೀಡಿ ಸಾಕ್ಷಿ ಸಂಗ್ರಹಿಸಿದ್ದರು. ಪೊಲೀಸ್ ಉಪಾಧ್ಯಕ್ಷ ಮಹೇಶ ಕೆ, ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್ ಸಾಕಷ್ಟು ಶೋಧ ನಡೆಸಿ ಶಂಕಿತರನ್ನು ವಿಚಾರಣೆಗೆ ಒಳಪಡಿಸಿದದರು.
ಭಟ್ಕಳ ಸಿಪಿಐ ಸಂತೋಷ ಕಾಯ್ಕಿಣಿ, ಕುಮಟಾ ಪಿಐ ಯೋಗೇಶ ಕೆ ಎಂ ಸಹ ತನಿಖೆಯಲ್ಲಿ ಭಾಗವಹಿಸಿದ್ದರು. ಪಿಎಸ್ಐ ಭರತ, ರವಿ ಗುಡಿ, ಮಯೂರ, ಶ್ರೀಕಾಂತ ರಾಠೋಡ, ಖಾದರ ಪಾಷಾರನ್ನು ಒಳಗೊಂಡ ಮೂರು ತಂಡಗಳು ಗೋ ಭಕ್ಷಕರ ಹುಡುಕಾಟ ನಡೆಸಿದ್ದವು.
ಇದೀಗ ಹೊನ್ನಾವರದ ಹೆರಂಗಡಿ ಅಪ್ಕಾರ ಕಾಲೋನಿಯ ಚಾಲಕ ಅಲ್ತಾಪ್ ಅಹಮ್ಮದ್ ಕಾಟಾಪುರುಸು (28), ಅದೇ ಊರಿನ ಮತೀನ್ ಅಹಮ್ಮದ್ ಕಾಟಾಪುರುಸು (37) ಹಾಗೂ ಹೊನ್ನಾವರ ಕುರ್ವಾದಲ್ಲಿ ಅಡುಗೆ ಕೆಲಸ ಮಾಡುವ ಮಹಮ್ಮದ್ ಹುಸೇನ್ ಅಬ್ಬಾಸ ಕುರ್ವೇ ಸಿಕ್ಕಿ ಬಿದ್ದಿದ್ದಾರೆ. ಈ ಮೂವರು ಸೇರಿ ಹೊನ್ನಾವರದ ಸಾಲ್ಕೋಡ, ಹೊಸಾಕುಳಿ ಹಾಗೂ ಕವಲಕ್ಕಿ ಭಾಗದಲ್ಲಿ ಗೋ ಕಳ್ಳತನ ನಡೆಸುತ್ತಿರುವುದು ತನಿಖೆಯಿಂದ ಗೊತ್ತಾಗಿದೆ.