ಕಾರವಾರ-ಗೋವಾದಿಂದ ಗೋಕರ್ಣಕ್ಕೆ ಮದ್ಯ ಸಾಗಾಟದ ಹಿನ್ನಲೆ ಪೊಲೀಸ್ ಸಿಬ್ಬಂದಿ ಸಂತೋಷ ಲಮಾಣಿ ಆರು ತಿಂಗಳ ಹಿಂದೆ ಅಮಾನತಾಗಿದ್ದರು. ಸೇವೆಗೆ ಮರು ನಿಯೋಜನೆ ಬೆನ್ನಲ್ಲೆ ಮತ್ತೆ ಗೋವಾದಿಂದ ಅಂಕೋಲಾ ಕಡೆ ಮದ್ಯ ಸಾಗಿಸುವಾಗ ಅವರು ಸಿಕ್ಕಿಬಿದ್ದಿದ್ದು, ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಇದೀಗ ಮತ್ತೆ ಸಂತೋಷ ಲಮಾಣಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ!
ಸಂತೋಷ ಲಮಾಣಿ 2024ರಲ್ಲಿ ಕಾರವಾರದ ಕದ್ರಾ ಪೊಲೀಸ್ ಠಾಣೆಯಲ್ಲಿದ್ದರು. ಜೂನ್ 12ರಂದು ಗೋವಾದಿಂದ ಸರಾಯಿ ಸಾಗಿಸುವಾಗ ಸಿಕ್ಕಿ ಬಿದ್ದಿದ್ದರು. ಈ ಹಿನ್ನಲೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತೋಷ ಲಮಾಣಿ ಅವರ ಅಮಾನತು ಆದೇಶ ಹಿಂಪಡೆದು, ಅವರ ಮೇಲಿನ ತನಿಖೆ ಬಾಕಿಯಿರಿಸಿ ಅವರನ್ನು 2024ರ ಡಿಸೆಂಬರ್ 9ರಂದು ಹಳಿಯಾಳ ಪೊಲೀಸ್ ಠಾಣೆಗೆ ಮರುನಿಯೋಜನೆ ಮಾಡಲಾಗಿತ್ತು. ಈ ನಡುವೆ ಫೆ 6ರಂದು ಕಾರವಾರದ ನ್ಯಾಯಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹಳಿಯಾಳದಿಂದ ಹೊರಟಿದ್ದ ಸಂತೋಷ ಲಮಾಣಿ ಅಕ್ರಮ ಸರಾಯಿ ಮಾರಾಟ ಮಾಡುವವರಿಗೆ ನೆರವು ನೀಡಿ ಸಿಕ್ಕಿ ಬಿದ್ದಿದ್ದಾರೆ.
ಆ ದಿನ ಕಾರವಾರದಿಂದ ಅಂಕೋಲಾ ಕಡೆ ಬರುತ್ತಿದ್ದ ಕಾರು ತಪಾಸಣೆ ನಡೆಸಿದ ಅಂಕೋಲಾ ಪೊಲೀಸರು ಅಕ್ರಮ ಸರಾಯಿ ಮಾರಾಟಗಾರರನ್ನು ತಡೆದಿದ್ದರು. ಕಾರಿನಲ್ಲಿದ್ದ ಆರೋಪಿಗಳು ಆಗ ಪೊಲೀಸ್ ಸಿಬ್ಬಂದಿ ಸಂತೋಷ ಲಮಾಣಿ ಹೆಸರು ಬಾಯ್ಬಿಟ್ಟಿದ್ದರು. ಇದಕ್ಕೆ ಸಾಕ್ಷಿಯಾಗಿ ಆತನಿಗೆ ಮಾಡಿದ ಫೋನು-ಮೆಸೆಜ್’ನ್ನು ಕಾಣಿಸಿದ್ದರು. ಹೀಗಾಗಿ ಕಾರವಾರದ ಮೂಡಗೇರಿ ಬಳಿ ಪೊಲೀಸರು ಸಂತೋಷ ಲಮಾಣಿಯನ್ನು ವಶಕ್ಕೆ ಪಡೆದರು. 80 ಸಾವಿರ ರೂ ಮೌಲ್ಯದ ಗೋವಾ ಸರಾಯಿಯನ್ನು ಸಂತೋಷ ಲಮಾಣಿ ತನ್ನ ಪ್ರಭಾವ ಬೀರಿ ಕರ್ನಾಟಕದ ಗಡಿ ದಾಡಿಸಿರುವುದು ಬೆಳಕಿಗೆ ಬಂದಿದೆ.
ಫೆ 6ರಂದು ಕೋರ್ಟಿನ ಟಪಾಲು ಹಿಡಿದು ಕಾರವಾರಕ್ಕೆ ಹೋಗುವುದಾಗಿ ಹೇಳಿದ್ದ ಸಂತೋಷ ಲಮಾಣಿ ಸಮಯಕ್ಕೆ ಸರಿಯಾಗಿ ಕೋರ್ಟಿಗೆ ಹೋಗಿರಲಿಲ್ಲ. ನ್ಯಾಯಾಲಯಕ್ಕೆ ನೀಡಬೇಕಾದ ಟಪಾಲನ್ನು ನೀಡದೇ ಕರ್ತವ್ಯಲೋಪ ಎಸಗಿದ ಬಗ್ಗೆ ಹಳಿಯಾಳ ಪೊಲೀಸ್ ನಿರೀಕ್ಷಕರು ಸಹ ವರದಿ ಸಲ್ಲಿಸಿದ್ದರು. ಇದರೊಂದಿಗೆ ವ್ಯಕ್ತಿಯೊಬ್ಬರಿಂದಲೂ ಸಂತೋಷ ಲಮಾಣಿ ಹಣ ಪಡೆದು ಅದನ್ನು ಮರುಪಾವತಿಸದೇ ವಂಚಿಸಿದ ಬಗ್ಗೆಯೂ ದೂರು ದಾಖಲಾಗಿತ್ತು. ಹಣ ಕೊಟ್ಟವರ ಕಾರನ್ನು ದುರುಪಯೋಗಪಡಿಸಿಕೊಂಡು ಅದರಲ್ಲಿಯೇ ಅಕ್ರಮ ಮದ್ಯ ಸಾಗಾಟ ನಡೆಸಿದ ಬಗ್ಗೆಯೂ ದೂರಲಾಗಿತ್ತು.
ಈ ಎಲ್ಲಾ ಪ್ರಕರಣಗಳನ್ನು ಗಮನಿಸಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಸಂತೋಷ ಲಮಾಣಿ ಅವರನ್ನು ಮತ್ತೊಮ್ಮೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.