ಹೊನ್ನಾವರ-ಹೊನ್ನಾವರದ ಇಸ್ಪಿಟ್ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದ ಟೇಬಲ್-ಖುರ್ಚಿಗಳನ್ನು ಜಪ್ತು ಮಾಡಿದ್ದಾರೆ. ಜೊತೆಗೆ ಅಂದರ್ ಬಾಹರ್ ಆಡುತ್ತಿದ್ದ 17 ಜನರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಹೊನ್ನಾವರದ ಕಂತಾಲಕರಕೇರಿಯಲ್ಲಿರುವ ಹೆಗಡೆ ಕಾಂಪ್ಲೆಕ್ಸಿನಲ್ಲಿ ಪ್ರೆಂಡ್ಸ ಕ್ಲಬ್ ಎಂಬ ಮಳಿಗೆಯಿದೆ. ಅಲ್ಲಿ ನಿರಂತರವಾಗಿ ಇಸ್ಪಿಟ್ ದಂಧೆ ನಡೆಯುತ್ತಿದೆ. ಈ ಬಗ್ಗೆ ಮಾಹಿತಿಪಡೆದ ಸಂಗ್ರಹಿಸಿದ ಪೊಲೀಸರು ಕಾನೂನುಬಾಹಿರ ಚಟುವಟಿಕೆ ತಡೆಗಾಗಿ ತಂಡ ರಚಿಸಿದ್ದು, ಮಾರ್ಚ 27ರ ರಾತ್ರಿ 9 ಗಂಟೆ ಆಸುಪಾಸಿನಲ್ಲಿ ಪಿಎಸ್ಐ ಮಂಜುನಾಥ್ ಅವರು ಸರ್ಚ ವಾರೆಂಟ್ ಜೊತೆ ದಾಳಿ ಮಾಡಿದರು.
ಆಗ ಹೊನ್ನಾವರದ ಪ್ರದೀಪ ಶೆಟ್ಟಿ, ಮಲ್ಲೇಶ, ಮುಗ್ವಾ ಹಳಗೇರಿಯ ಮಂಜುನಾಥ ಗೌಡ, ಅದೇ ಊರಿನ ದೇವಾ ಗೌಡ, ಕುಂದಾಪುರದ ಶ್ರೀನಿವಾಸ ಖಾರ್ವಿ, ಕಾಸರಕೋಡು ಕೆಳಗನೂರಿನ ಮಂಜುನಾಥ ಗೌಡ, ಮುಂಡಗೋಡು ಆರೋಳ್ಳಿಯ ಗಣೇಶ ಗೌಡ, ಅದೇ ಊರಿನ ಸುಬ್ರಾಯ ಗೌಡ, ಹೊನ್ನಾವರ ಬೆರುಳ್ಳಿ ನಗರೆಯ ರಮೇಶ ಗೌಡ ಸಿಕ್ಕಿ ಬಿದ್ದಿದ್ದಾರೆ.
ಇದರೊಂದಿಗೆ ಅಂದರ್ ಬಾಹರ್ ಆಟದಲ್ಲಿ ಮುಳುಗಿದ್ದ ಕುಮಟಾ ಬಾಡದ ವಾಸುದೇವ ನಾಯ್ಕ, ಕುಮಟಾ ಅಳ್ವೆಕೊಡಿಯ ಈಶ್ವರ ನಾಯ್ಕ, ಕರ್ಕಿ ತೊಪ್ಪಲಕೇರಿಯ ವಿಶ್ವನಾಥ ನಾಯ್ಕ, ಗುಣವಂತೆ ಕೆರೆಮನೆಯ ನಾರಾಯಣ ನಾಯ್ಕ, ನೀಲ್ಕೋಡಿನ ಗಣಪಯ್ಯ ಗೌಡ, ಹಳದಿಪುರ ಈರಪ್ಪನತ್ಲದ ನಾರಾಯಣ ಹರಿಕಂತ್ರ, ಹೊನ್ನಾವರ ಉದ್ಯಮನಗರದ ದಾಮೋಧರ ಮೇಸ್ತಾ ಹಾಗೂ ಹೊನ್ನಾವರ ಹೊಸಹಿತ್ಲದ ವಿಷ್ಣು ಹರಿಕಂತ್ರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಸ್ಪಿಟ್ ಆಟದಲ್ಲಿ ಹೂಡಿಕೆ ಮಾಡಿದ್ದ 17560ರೂ ಹಣ ಪೊಲೀಸರಿಗೆ ಸಿಕ್ಕಿದೆ. ವಿವಿಧ ಸಂಖ್ಯೆ ನಮೂದಿಸಿದ 41 ಪ್ಲಾಸ್ಟಿಕ್ ನಾಣ್ಯ, ಇಸ್ಪಿಟ್ ಎಲೆ, ಪ್ರೆಂಡ್ಸ ಕ್ಲಬ್ ಹೆಸರಿನ ರಸೀದಿ ಪುಸ್ತಕ, ಸದಸ್ಯರ ನೊಂದಣಿಯ ರಿಜಿಸ್ಟರ್ ಪುಸ್ತಕದ ಜೊತೆ ಅಲ್ಲಿದ್ದ ಟೇಬಲ್-ಖುರ್ಚಿಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಜೂಜಾಟದಲ್ಲಿನಿರತ ಎಲ್ಲರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.