ಭಟ್ಕಳ-ಅಜ್ಜಿಯ ಬಂಗಾರ ಕದ್ದು ಮುತ್ತೋಟ ಫೈನಾನ್ಸ್’ನಲ್ಲಿ ಅಡಗಿಸಿಟ್ಟಿದ್ದ ಭಟ್ಕಳದ ತಜಮುಲ್ ಹಸನ್’ರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅಡವಿಟ್ಟ ಬಂಗಾರವನ್ನು ವಶಕ್ಕೆಪಡೆದಿದ್ದಾರೆ.
ಭಟ್ಕಳ ಕಳಿಹನುಂತ ದೇವಸ್ಥಾನ ಎದುರಿನ ಮೌಲನ್ ಆಜಾದ್ ರಸ್ತೆಯಲ್ಲಿ ತಜಮುಲ್ ಹಸನ್ ಅವರು ತಾಜ್ ವಿಲ್ಲಾ ಎಂಬ ಮನೆ ನಿರ್ಮಿಸಿಕೊಂಡಿದ್ದರು. ಆ ಮನೆಯಲ್ಲಿ ಅವರ 92 ವರ್ಷದ ಅಜ್ಜಿ ಬಿ ಬಿ ಸಾರಾ ಸಹ ವಾಸವಾಗಿದ್ದರು. ಬಿ ಬಿ ಸಾರಾ ಅವರು ತಲೆ ದಿಂಬಿನ ಅಡಿ ಬಂಗಾರವಿಡುವುದನ್ನು ನೋಡಿದ್ದ ತಜಮುಲ್ ಹಸನ್ ಮಾರ್ಚ 14 ಹಾಗೂ 15ರ ನಡುವಿನ ಅವಧಿಯಲ್ಲಿ ಅದನ್ನು ಕದ್ದಿದ್ದರು.
ಅದಾದ ನಂತರ ಒಟ್ಟು 4.50 ಲಕ್ಷ ರೂ ಮೌಲ್ಯದ ಬಂಗಾರ ಕಳ್ಳತನ ನಡೆದ ಬಗ್ಗೆ ಅಜ್ಜಯ ಪರವಾಗಿ ತಜಮುಲ್ ಹಸನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. 90 ಗ್ರಾಂ ಬಂಗಾರ ಕಳ್ಳತನವಾಗಿದೆ ಎಂದು ತಜಮುಲ್ ಹಸನ್ ಪೊಲೀಸರ ಮುಂದೆ ಹೇಳಿದ್ದರು. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಈ ಪ್ರಕರಣ ಆಲಿಸಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಅವರ ಜೊತೆ ಚರ್ಚಿಸಿದರು. ಪೊಲೀಸ್ ಉಪಾಧ್ಯಕ್ಷ ಮಹೇಶ ಎಂ ಕೆ, ಭಟ್ಕಳ ಗ್ರಾಮೀಣ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಅವರಿಗೆ ತನಿಖಾ ವಿಧಾನಗಳ ಬಗ್ಗೆ ತಿಳಿಸಿದರು.
ಅದರ ಪ್ರಕಾರ ತನಿಖಾಧಿಕಾರಿ ನವೀನ ನಾಯ್ಕ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು. ಪೊಲೀಸ್ ಸಿಬ್ಬಂದಿ ದಿನೇಶ ನಾಯ್ಕ, ಅರುಣ ಪಿಂಟೋ, ದೀಪಕ ಎಸ್ ನಾಯ್ಕ, ಮದರಸಾಬ ಚಕ್ಕೇರಿ ಹಾಗೂ ದೇವು ನಾಯ್ಕ ಸಹ ವಿಚಾರಣೆ ನಡೆಸಿದರು. ಆಗ, ದೂರುದಾರ ತಜಮುಲ್ ಹಸನ್ ಚಿನ್ನ ಕದ್ದಿರುವುದು ಗೊತ್ತಾಯಿತು. ಪೊಲೀಸರು ತಜಮುಲ್ ಹಸನ್’ರನ್ನು ವಶಕ್ಕೆ ಪಡೆದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಆ ವೇಳೆ ತಜಮುಲ್ ಹಸನ್ ಸ್ವ-ಖುಷಿಯಿಂದ ನೀಡಿದ ಹೇಳಿಕೆ ಆಧರಿಸಿ ಪೊಲೀಸ್ ಸಿಬ್ಬಂದಿ ಶ್ರೀಧರ ತಾಂಡೇಲ್, ಮಹಾಂತೇಶ ಹಿರೇಮಠ್, ಕಿರಣ ಪಾಟೀಲ ಹಾಗೂ ವಿಲಿಯಂ ಫರ್ನಾಂಡಿಸ್ ಮುತ್ತೋಟ ಫೈನಾನ್ಸ್ ಕದ ತಟ್ಟಿದರು. ಅಲ್ಲಿ ಅಡವಿಟ್ಟಿದ್ದ ಆರು ಬಂಗಾರದ ಬಳೆ, ಎರಡು ಕಡಾಯಿ, ಬಂಗಾರದ ಚೈನ್ ಸೇರಿ 86.600 ಗ್ರಾಂ ಮೌಲ್ಯದ ಚಿನ್ನವನ್ನು ಜಪ್ತು ಮಾಡಿದರು.