ಶಿರಸಿ-ಭೂ ಪರಿವರ್ತನೆಯಾಗಿ ಕಟ್ಟಡ ನಿರ್ಮಾಣದ ನಂತರವೂ ಮನೆ ಸಂಖ್ಯೆ ನೀಡಲು 15 ಸಾವಿರ ರೂ ಲಂಚ ಬೇಡಿದ್ದ ಶಿರಸಿ ಜಾನ್ಮನೆ ಪಿಡಿಓ ಕೃಷ್ಣಪ್ಪ ಯಲವಲಗಿ ಅವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಜೊತೆಗೆ 5 ಸಾವಿರ ರೂ ದಂಡವನ್ನು ಪಾವತಿಸುವಂತೆ ಸೂಚಿಸಿದೆ.
ಕೃಷ್ಣಪ್ಪ ಯಲವಲಗಿ ಮುಂಡಗೋಡು ತಾಲೂಕಿನವರು. 2010ರಲ್ಲಿ ಅವರು ಶಿರಸಿ ಜಾನ್ಮನೆ ಗ್ರಾ ಪಂ ಪಿಡಿಓ ಆಗಿದ್ದರು. ಬೆಂಗಳೂರಿನಲ್ಲಿ ವಾಸವಾಗಿರುವ ಸುಕ್ರಿಮನೆಯ ಸುಧೀಂದ್ರ ಹೆಗಡೆ ಅವರಿಂದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.
ಸುಧೀಂದ್ರ ಹೆಗಡೆ ಅವರು 14 ಗುಂಟೆ ಜಾಗ ಖರೀದಿಸಿ ಅದನ್ನು ಎನ್ಎ ಮಾಡಿದ್ದರು. ಅದಾದ ನಂತರ ಅಲ್ಲಿ ಮನೆ ಕಟ್ಟಿದ್ದರು. ಆದರೆ, ಮನೆ ಸಂಖ್ಯೆಗೆ ಸಲ್ಲಿಸಿದ ಅರ್ಜಿಯನ್ನು ಪಿಡಿಓ ಅನಗತ್ಯವಾಗ ತಿರಸ್ಕರಿಸಿದ್ದರು. `ಈ ಕೆಲಸ ಸಾಕಷ್ಟು ಕಿರಿಕಿರಿ. ಫೀ ಬಿಟ್ಟು 15 ಸಾವಿರ ಕೊಟ್ಟರೆ ಮಾಡಿಕೊಡುವೆ’ ಎಂದು ಕೃಷ್ಣಪ್ಪ ಯಲವಲಗಿ ಕೈ ಒಡ್ಡಿದ್ದರು. ಜೊತೆಗೆ `ಮೇಲಧಿಕಾರಿಗಳಿಗೂ ಹಣ ಕೊಡಬೇಕು’ ಎಂದಿದ್ದರು.
ಈ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತರು ದಾಳಿ ನಡೆಸಿ, ಕೃಷ್ಣಪ್ಪ ಅವರನ್ನು ಬಂಧಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ ಅವರು ಶಿಕ್ಷೆ ಪ್ರಕಟಿಸಿದ್ದಾರೆ.