ಭಟ್ಕಳ :ಉತ್ತರ ಕನ್ನಡ ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ಅನಧಿಕೃತ ಕ್ಲಿನಿಕ್‌ಗಳ ಹಾವಳಿ ದಿನೇದಿನೇ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವೈದ್ಯರ ಸೋಗಿನಲ್ಲಿ ಕೆಲವರು ಯಾವುದೇ ಮಾನ್ಯತೆ ಇಲ್ಲದೇ ಕ್ಲಿನಿಕ್ ನಡೆಸುತ್ತಿರುವುದು ಬೆಳಕಿಗೆ ಬರುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಆರೋಗ್ಯ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದರೂ, ನಕಲಿ ವೈದ್ಯರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಮುಂಡಗೋಡು, ಅಂಕೋಲಾ ಮತ್ತು ಭಟ್ಕಳ ಪ್ರದೇಶಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಹಲವಾರು ನಕಲಿ ವೈದ್ಯರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಿದ್ದಾರೆ. ಕೆಲ ಕ್ಲಿನಿಕ್‌ಗಳನ್ನು ಮುಚ್ಚಲಾಗಿದ್ದರೂ, ಕೆಲವೇ ದಿನಗಳಲ್ಲಿ ಮತ್ತೆ ಅದೇ ಸ್ಥಳದಲ್ಲಿ ಹೊಸ ಹೆಸರಿನಲ್ಲಿ ಕಾರ್ಯಾರಂಭ ಮಾಡುವ ಘಟನೆಗಳು ಮರುಕಳಿಸುತ್ತಿವೆ.
ಇನ್ನಷ್ಟು ಆತಂಕಕಾರಿ ಸಂಗತಿಯೇನೆಂದರೆ, ಆಯುರ್ವೇದ ಅಥವಾ ಇತರೆ ಪದವಿ ಹೊಂದಿರುವ ಕೆಲವರು ಇಂಗ್ಲಿಷ್ ಔಷಧಿಗಳನ್ನು ನೀಡುವುದು, ಅಗತ್ಯ ಪರವಾನಗಿ ಇಲ್ಲದೇ ಇಂಜೆಕ್ಷನ್ ಕೊಡುವುದು ಹಾಗೂ ತಮ್ಮದೇ ಔಷಧಿ ಅಂಗಡಿಗಳನ್ನು ನಡೆಸಿ ಅನಗತ್ಯ ಮಾತ್ರೆಗಳನ್ನು ಮಾರಾಟ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಅಂಕೋಲದಲ್ಲೂ ಇತ್ತೀಚೆಗೆ ನಕಲಿ ಕ್ಲಿನಿಕ್ ಮೇಲೆ ದಾಳಿ ನಡೆಸಿ ನೋಟಿಸ್ ನೀಡಲಾಗಿದೆ.
ಜಿಲ್ಲೆಯ ಅನೇಕ ಖಾಸಗಿ ಕ್ಲಿನಿಕ್‌ಗಳು ನಿಯಮಾನುಸಾರ ಕಾರ್ಯನಿರ್ವಹಿಸುತ್ತಿಲ್ಲ. ಸರಿಯಾದ ದಾಖಲೆಗಳಿಲ್ಲದೇ ಆಸ್ಪತ್ರೆ ನಡೆಸುವುದು ಹಾಗೂ ಅರ್ಹತೆ ಇಲ್ಲದೇ ಚಿಕಿತ್ಸೆ ನೀಡುವುದು ರೋಗಿಗಳ ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ. ಅನುಭವವಿಲ್ಲದವರಿಂದ ಚಿಕಿತ್ಸೆ ಪಡೆಯುವ ಜನರು ಗಂಭೀರ ಸಮಸ್ಯೆಗಳಿಗೆ ಒಳಗಾಗುತ್ತಿರುವುದು ಕಂಡುಬರುತ್ತಿದೆ.
ಈ ಸಮಸ್ಯೆಗೆ ಪ್ರಮುಖ ಕಾರಣವೆಂದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ. ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದ ಕಾರಣ ಖಾಸಗಿ ಕ್ಲಿನಿಕ್‌ಗಳತ್ತ ಮುಖ ಮಾಡಬೇಕಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಅಭಾವದಿಂದ ಜನರು ನಕಲಿ ವೈದ್ಯರ ಬಲೆಗೆ ಬೀಳುತ್ತಿದ್ದಾರೆ.ದಾಳಿ ವೇಳೆ ನಕಲಿ ವೈದ್ಯರು ಸ್ಥಳ ತೊರೆದು ಹೋಗಿ, ನಂತರ ಬೇರೆ ಊರಿನಲ್ಲಿ ಹೊಸ ಕ್ಲಿನಿಕ್ ಆರಂಭಿಸುವುದು ಸಾಮಾನ್ಯವಾಗುತ್ತಿದೆ. ಗ್ರಾಮೀಣ ಪ್ರದೇಶದ ಅಮಾಯಕರು ಮಾತ್ರವಲ್ಲ, ಪಟ್ಟಣದ ಜನರೂ ಕೂಡ ಈ ನಕಲಿ ವೈದ್ಯರ ಪ್ರಯೋಗಗಳಿಗೆ ಬಲಿಯಾಗುತ್ತಿರುವುದು ದುಃಖಕರ ಸಂಗತಿ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಸರ್ಕಾರಿ ಆಸ್ಪತ್ರೆಗಳ ಸೌಲಭ್ಯಗಳನ್ನು ಹೆಚ್ಚಿಸುವುದು ಹಾಗೂ ಅನಧಿಕೃತ ಕ್ಲಿನಿಕ್‌ಗಳ ಮೇಲೆ ನಿರಂತರ ನಿಗಾ ಇಡುವುದು ಅವಶ್ಯಕವಾಗಿದೆ.
ಸಾರ್ವಜನಿಕರು ಕೂಡ ವೈದ್ಯರ ಅರ್ಹತೆ ಮತ್ತು ನೋಂದಣಿ ಪರಿಶೀಲಿಸುವುದು, ಅನುಮಾನಾಸ್ಪದ ಕ್ಲಿನಿಕ್‌ಗಳ ಬಗ್ಗೆ ಮಾಹಿತಿ ನೀಡುವುದು ಸೇರಿದಂತೆ ಜಾಗರೂಕತೆ ವಹಿಸಬೇಕು. ಇಲ್ಲವಾದರೆ, ನಕಲಿ ವೈದ್ಯರ ಹಾವಳಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
