ಅಂಕೋಲಾ: ಪತ್ರಕರ್ತರು ಸಮಾಜದ ಒಳಿತಿಗಾಗಿ ಅಕ್ಷರ ಲೋಕದ ರಾಯಭಾರಿಗಳಂತೆ ಸೇವೆ ಸಲ್ಲಿಸುತ್ತಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಸಂಘಟನೆಯ ಪ್ರಮುಖ ಗುರಿಯಾಗಿದೆ ಎಂದು ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಹೇಳಿದರು.
ತಾಲೂಕಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಕೋಲಾ ತಾಲೂಕು ಸಮಿತಿಯ ಸದಸ್ಯರ ಕಾರ್ಡ್‌ಗಳನ್ನು ಬಿಡುಗಡೆಗೊಳಿಸಿ, ಸಮನ್ವಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪತ್ರಕರ್ತರ ಮೇಲಿನ ಶೋಷಣೆ, ದಬ್ಬಾಳಿಕೆಗಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಶಕ್ತಿಯಾಗಿ “ಪತ್ರಕರ್ತರ ಧ್ವನಿ” ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಸದಾ ಪತ್ರಕರ್ತರ ಬೆಂಬಲಕ್ಕೆ ನಿಲ್ಲಲಿದೆ ಎಂದು ಹೇಳಿದರು.
ಮೂರುವರೆ ವರ್ಷಗಳಲ್ಲಿ ಸಂಘಟನೆ 3600ಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, ಶೀಘ್ರದಲ್ಲೇ ರಾಜ್ಯದ ಅತಿ ದೊಡ್ಡ ಪತ್ರಕರ್ತರ ಸಂಘಟನೆಯಾಗಿ ಗುರುತಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದಶಕಗಳಲ್ಲಿ ಸಾಧ್ಯವಾಗದ ಹಲವಾರು ಕಾರ್ಯಗಳನ್ನು ಸಂಘಟನೆ ಸಾಧಿಸಿದೆ ಎಂದು ಹೇಳಿದರು.ಪತ್ರಕರ್ತರ ಹಿತಾಸಕ್ತಿಗೆ ಧಕ್ಕೆಯುಂಟುಮಾಡುವ ಅನಪೇಕ್ಷಿತ ವ್ಯಕ್ತಿಗಳಿಗೆ ಸಂಘಟನೆ ತಕ್ಕ ಪಾಠ ಕಲಿಸುವ ಮೂಲಕ ರಕ್ಷಣೆಗೆ ನಿಲ್ಲಲಿದೆ. ಜೊತೆಗೆ, ಮಾನವೀಯ ನೆರವು ಒದಗಿಸುವುದು ಹಾಗೂ ಸಂಕಷ್ಟದ ಸಮಯದಲ್ಲಿ ತಕ್ಷಣ ಸ್ಪಂದಿಸುವ ಕಾರ್ಯಶೀಲತೆಯಿಂದ ನೂರಾರು ಜನರು ಸದಸ್ಯತ್ವ ಪಡೆಯಲು ಆಸಕ್ತಿ ತೋರಿದ್ದಾರೆ ಎಂದು ತಿಳಿಸಿದರು.ಇದೇ ವೇಳೆ, ಆಗಸ್ಟ್ 8ರಂದು ನೆಲಮಂಗಲದಲ್ಲಿ ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು.
ಅಂಕೋಲಾ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಮಾರುತಿ ಹರಿಕಂತ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳು, ಆಯೋಜಿತ ಕಾರ್ಯಕ್ರಮಗಳು ಹಾಗೂ ಸಂಘಟನೆ ಬಲಪಡಿಸುವ ಅಗತ್ಯತೆಯ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ವಿದ್ಯಾದರ ಮೊರಬಾ, ವಿಲಾಸ ನಾಯಕ, ನಾಗರಾಜ ಶೆಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
