ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜನರು ಬಹುಕಾಲದಿಂದ ಎದುರು ನೋಡುತ್ತಿದ್ದ ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ಸಂಭವಿಸಿದೆ. ಸೀಮಾ ನಿರ್ಣಯ ಆಯೋಗವು ಜಿಲ್ಲೆಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪುನರ್‌ವಿಂಗಡಣೆಯನ್ನು ಪೂರ್ಣಗೊಳಿಸಿ, ಒಟ್ಟು 53 ಕ್ಷೇತ್ರಗಳ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದೆ.
ಸುಮಾರು ಐದು ವರ್ಷಗಳಿಂದ ಜಿಲ್ಲಾ ಪಂಚಾಯತ್ ವ್ಯವಸ್ಥೆ ಕಾರ್ಯನಿರ್ವಹಿಸದೆ ಇರುವುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳು ಹಿನ್ನಡೆಯಾಗಿದ್ದವು. ಜನಪ್ರತಿನಿಧಿಗಳ ಕೊರತೆಯಿಂದ ರಸ್ತೆ, ಕುಡಿಯುವ ನೀರು, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳು ಬಾಕಿ ಉಳಿದಿದ್ದವು. ಇದೀಗ ಕ್ಷೇತ್ರಗಳ ಪುನರ್‌ವಿಂಗಡಣೆ ಪೂರ್ಣಗೊಂಡಿರುವುದು ಜಿಲ್ಲೆಯ ಅಭಿವೃದ್ಧಿಗೆ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ.ಭಟ್ಕಳ ಪಟ್ಟಣ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ ಹಿನ್ನೆಲೆಯಲ್ಲಿ, ಒಂದು ಜಿಲ್ಲಾ ಪಂಚಾಯತ್ ಕ್ಷೇತ್ರ ಕಡಿತಗೊಂಡಿದ್ದು, ಜಿಲ್ಲೆಯ ಒಟ್ಟು ಕ್ಷೇತ್ರಗಳ ಸಂಖ್ಯೆ 53ಕ್ಕೆ ಇಳಿಕೆಯಾಗಿದೆ
ತಾಲೂಕುವಾರು ಕ್ಷೇತ್ರಗಳ ವಿವರ ಹೀಗಿದೆ: ಕಾರವಾರ (5), ಅಂಕೋಲಾ (5), ಕುಮಟಾ (6), ಹೊನ್ನಾವರ (7), ಭಟ್ಕಳ (5), ಶಿರಸಿ (6), ಯಲ್ಲಾಪುರ (3), ಸಿದ್ಧಾಪುರ (4), ಹಳಿಯಾಳ (4), ಮುಂಡಗೋಡು (4), ಜೊಯಿಡಾ (3), ದಾಂಡೇಲಿ (1).
ಸೀಮಾ ನಿರ್ಣಯ ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಗ್ರಾಮೀಣ ಭಾಗದ ಅಭಿವೃದ್ಧಿಗೆ ಮತ್ತೊಮ್ಮೆ ಚೈತನ್ಯ ಬರಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.
