ಅಂಕೋಲಾ, :ಗೃಹ ಸಚಿವರ ಹೆಸರನ್ನು ಬಳಸಿಕೊಂಡು ಕೆಲವರು ಅಂಕೋಲಾದಲ್ಲಿ ಪ್ರಭಾವ ಬೀರುತ್ತಿದ್ದು, ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕು ಎಂದು ನ್ಯಾಯವಾದಿ ನಾಗರಾಜ ನಾಯಕ ಆಗ್ರಹಿಸಿದರು. ಪೊಲೀಸ್ ಇಲಾಖೆಯ ವೈಫಲ್ಯ ಖಂಡಿಸಿ ಪಟ್ಟಣದ ಪೊಲೀಸ್ ಠಾಣೆ ಹಾಗೂ ತಹಶೀಲ್ದಾರ್ ಕಚೇರಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಅವರು ಮಾತನಾಡಿದರು.
ಗೃಹ ಸಚಿವರ ಆಪ್ತ ಎಂದು ಹೇಳಿಕೊಳ್ಳುತ್ತಿರುವ ಗೋಪಾಲಕೃಷ್ಣ ನಾಯಕ ಶಾಸಕ ಸ್ಥಾನಾಕಾಂಕ್ಷೆಯಿಂದ ಅಂಕೋಲಾದ ಶಾಂತ ವಾತಾವರಣದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. ಗೃಹ ಸಚಿವರ ಪ್ರಭಾವ ಬಳಸಿ ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ನಡೆಸಲಾಗುತ್ತಿದೆ ಎಂದು ದೂರಿದರು.

ಅಂಕೋಲಾ ಪೊಲೀಸರು ನಿಜವಾದ ಅಪರಾಧಿಗಳನ್ನು ಬಿಟ್ಟು ನಿರಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ವಂದಿಗೆಯ ಸುಂದರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ವೇಳೆ ತಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ನಡೆದಿದ್ದರೂ, ದೂರು ನೀಡಲು ಹೋದಾಗ ತಮ್ಮೊಂದಿಗೆ ಬಂದ ಅಮಾಯಕರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಗೃಹ ಸಚಿವರ ಕಚೇರಿಯಿಂದ ಪೊಲೀಸ್ ಠಾಣೆಗೆ ಕರೆ ಮಾಡಿ ಒತ್ತಡ ತರುವ ಮೂಲಕ ತನಿಖೆಯಲ್ಲಿ ಪ್ರಭಾವ ಬೀರುವ ಪ್ರಯತ್ನ ನಡೆಯುತ್ತಿದೆ. ಅಂಕೋಲಾ ಪೊಲೀಸ್ ಠಾಣೆ ಸಿಪಿಐ ಮತ್ತು ಡಿವೈಎಸ್ಪಿ ನಿಯಂತ್ರಣದಲ್ಲಿ ಇಲ್ಲದೆ, ಹೊರಗಿನ ಪ್ರಭಾವದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ವಂದಿಗೆಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಗೋಪಾಲಕೃಷ್ಣ ನಾಯಕ ವಿರುದ್ಧ 307 ಪ್ರಕರಣ ದಾಖಲಾಗಿದ್ದರೂ, ಬಳಿಕ ಅವರ ಹೆಸರನ್ನು ಕೈಬಿಡಲಾಗಿದೆ. ಇತರ ಪ್ರಕರಣಗಳಲ್ಲಿ ಪೊಲೀಸರು ವಿಭಿನ್ನ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.ಗೃಹ ಸಚಿವರು ಸ್ವತಃ ಅಂಕೋಲಾಕ್ಕೆ ಆಗಮಿಸಿ ಸಮಸ್ಯೆಗೆ ಸ್ಪಂದಿಸುವವರೆಗೆ ಧರಣಿ ಮುಂದುವರಿಯಲಿದೆ ಎಂದು ನಾಗರಾಜ ನಾಯಕ ತಿಳಿಸಿದರು.
