ಭಟ್ಕಳ: ಪಟ್ಟಣದ ಕಿದ್ವಾಯಿ ರಸ್ತೆಯ ಮನೆಯೊಂದರಲ್ಲಿ ಕಳ್ಳರು ಕಿಟಕಿ ಗ್ಲಾಸ್ ಒಡೆದು ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಕಿದ್ವಾಯಿ ರಸ್ತೆಯ ನಿವಾಸಿ ನಾಹಿದ್ ಅಕ್ತರ್ ಅವರ ಮನೆಯಲ್ಲಿ ಈ ಕಳವು ನಡೆದಿದೆ. ಶುಕ್ರವಾರ ಬೆಳಗಿನ ಜಾವ ಸುಮಾರು 12:50ರ ಸುಮಾರಿಗೆ ಮನೆಯ ಹಿಂಭಾಗದ ಕಿಟಕಿಯ ಗ್ಲಾಸ್ ಒಡೆದು ಒಳನುಗ್ಗಿದ ಕಳ್ಳರು ಮನೆಯ ಚಿಲಕ ತೆಗೆದು ಕಳವು ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕಳ್ಳರು ಒಟ್ಟು ₹5.50 ಲಕ್ಷ ಮೌಲ್ಯದ 55 ಗ್ರಾಂ ಚಿನ್ನಾಭರಣ ಹಾಗೂ ₹10,000 ನಗದು ಹಣ ದೋಚಿದ್ದಾರೆ. ಕಳುವಾದ ಆಭರಣಗಳಲ್ಲಿ ಎರಡು ಚಿನ್ನದ ಉಂಗುರಗಳು, ಚಿನ್ನದ ಲಾಕೆಟ್, ಕಿವಿಯೋಲೆ ಹಾಗೂ ಎರಡು ಚಿನ್ನದ ಚೈನ್‌ಗಳು ಸೇರಿವೆ.
ಈ ಕುರಿತು ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಭಟ್ಕಳ ಶಹರ ಪೊಲೀಸ್ ಠಾಣೆ ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ನಿರೀಕ್ಷಕ ದಿವಾಕರ ಪಿ.ಎಂ. ಹಾಗೂ ಪಿ.ಎಸ್.ಐ ತಿಮ್ಮಪ್ಪ ಎಸ್. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
