ಭಟ್ಕಳ: ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ನೀರು ನಿಲ್ಲುವ ಹಾಗೂ ತಾತ್ಕಾಲಿಕ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಮಂಕಾಳ ವೈದ್ಯ ಗುರುವಾರ ಭಟ್ಕಳದ ವಿವಿಧ ಕಾಮಗಾರಿ ಸ್ಥಳಗಳನ್ನು ಪರಿಶೀಲಿಸಿದರು.

ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ್, ಸಹಾಯಕ ಆಯುಕ್ತ ಜೆ. ಮಹೇಶ್, ಡಿವೈಎಸ್ಪಿ ಗಿರೀಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವರು ಬಸ್ತಿಯ ಸೇತುವೆ ಹಾಗೂ ಅಂಡರ್‌ಪಾಸ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು. ಅಲ್ಲದೆ ವೆಂಕಟಾಪುರ ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಆದಷ್ಟು ಬೇಗ ಮುಕ್ತಗೊಳಿಸುವಂತೆ ಹಾಗೂ ಭಟ್ಕಳ ಸರ್ಕಲ್‌ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆ ಇರುವುದರಿಂದ, ತಾತ್ಕಾಲಿಕ ಪ್ರವಾಹದ ಅಪಾಯ ಇರುವ ಪ್ರದೇಶಗಳಲ್ಲಿ ಜೆಸಿಬಿ ಯಂತ್ರಗಳ ಮೂಲಕ ಒಳಚರಂಡಿ ಕಾಲುವೆಗಳನ್ನು ನಿರ್ಮಿಸಿ, ನೀರನ್ನು ಹತ್ತಿರದ ಚರಂಡಿ, ನದಿ ಹಾಗೂ ನೈಸರ್ಗಿಕ ಜಲಮಾರ್ಗಗಳಿಗೆ ಹರಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ತಂಜಿಮ್ ಅಧ್ಯಕ್ಷ ಇನಾಯಿತುಲ್ಲ ಶಬಂದ್ರಿ, ತಾಲೂಕು ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಸೇರಿದಂತೆ ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು.
