ಭಟ್ಕಳ-All India Ideal Teachers Association ರಾಜ್ಯ ಸರ್ಕಾರವು ಹಿಜಾಬ್ ನಿಷೇಧಕ್ಕೆ ಸಂಬಂಧಿಸಿದ ಹಿಂದಿನ ಸಮವಸ್ತ್ರ ಆದೇಶವನ್ನು ಹಿಂಪಡೆದು, ಶಾಲೆ–ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ಕ್ರಮವನ್ನು ಸ್ವಾಗತಿಸಿದೆ.

ಭಟ್ಕಳದಲ್ಲಿ ಪ್ರಕಟಣೆ ನೀಡಿದ ಸಂಘಟನೆಯ ಕರ್ನಾಟಕ ಘಟಕದ ಅಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ, ಸರ್ಕಾರದ ಈ ನಿರ್ಧಾರವು ಸಾಮಾಜಿಕ ನ್ಯಾಯ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಬಲಪಡಿಸುವಂತಿದೆ ಎಂದು ಹೇಳಿದ್ದಾರೆ.
ಶಿಕ್ಷಣ ಸಂಸ್ಥೆಗಳು ಸಮಾನತೆ, ಭ್ರಾತೃತ್ವ ಹಾಗೂ ಘನತೆಯ ಮೌಲ್ಯಗಳನ್ನು ಬೆಳೆಸುವ ಕೇಂದ್ರಗಳಾಗಬೇಕು. ಹೊಸ ಆದೇಶವು ತಾರತಮ್ಯರಹಿತ ಮತ್ತು ಸಮತೋಲಿತ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.ಹಿಜಾಬ್ ವಿವಾದದ ಪರಿಣಾಮವಾಗಿ ಕಳೆದ ಕೆಲವು ವರ್ಷಗಳಲ್ಲಿ ಅನೇಕ ವಿದ್ಯಾರ್ಥಿನಿಯರು ಶಿಕ್ಷಣದಿಂದ ದೂರ ಉಳಿದಿದ್ದರು ಅಥವಾ ಆತಂಕದ ವಾತಾವರಣದಲ್ಲಿ ಕಲಿಯಬೇಕಾಗಿತ್ತು ಎಂದು ಅವರು ಗಮನಿಸಿದರು. ಪೇಟ, ಜನಿವಾರ ಹಾಗೂ ರುದ್ರಾಕ್ಷಿಯಂತೆಯೇ ಹಿಜಾಬ್‌ಗೂ ಅವಕಾಶ ನೀಡಿರುವುದು ಭಾರತದ ಬಹುತ್ವದ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಬಸವಣ್ಣ ಅವರ “ಇವ ನಮ್ಮವ” ತತ್ವವನ್ನು ಶಿಕ್ಷಣ ಕ್ಷೇತ್ರದಲ್ಲಿ ಜಾರಿಗೆ ತರುವ ದಿಶೆಯಲ್ಲಿ ಸರ್ಕಾರದ ನಿಲುವು ಶ್ಲಾಘನೀಯವಾಗಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ವಿಳಂಬವಿಲ್ಲದೆ ಆದೇಶವನ್ನು ಜಾರಿಗೆ ತಂದು, ವಿದ್ಯಾರ್ಥಿನಿಯರಿಗೆ ಮುಜುಗರರಹಿತ ಹಾಗೂ ಸೌಹಾರ್ದಯುತ ವಾತಾವರಣ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಈ ನಿರ್ಧಾರ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಪ್ರಕಟಣೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
