ಭಟ್ಕಳ: ರಾಷ್ಟ್ರೀಯ ಹೆದ್ದಾರಿ–66 ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಭಟ್ಕಳ ನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ತಾತ್ಕಾಲಿಕ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು Bhatkal Town Police Station ಪ್ರಕಟಣೆಯಲ್ಲಿ ತಿಳಿಸಿದೆ.
ಎಸ್ ಸರ್ಕಲ್ ಹಾಗೂ ಬಂದರ್ ರೋಡ್ ಕಡೆಯಿಂದ ಕೆಳಗಿನ ಮಾರ್ಕೆಟ್ ಕಡೆಗೆ ತೆರಳುವ ವಾಹನಗಳು ಬಂದರ್ ರೋಡ್, ಈದ್ಗಾ ಮೈದಾನ, ಸೋನಾರ ಕೆರೆ ಕ್ರಾಸ್ ಹಾಗೂ ಪೊಲೀಸ್ ಠಾಣೆ ಮುಂಭಾಗದ ರಸ್ತೆಯ ಮೂಲಕ ಸಂಚರಿಸಬೇಕಾಗಿದೆ.
ಹಾಗೆಯೇ ಮಾರಿಕಟ್ಟಾ ಹಾಗೂ ಹಳೆ ಬಸ್ ನಿಲ್ದಾಣ ಕಡೆಯಿಂದ ಎಸ್ ಸರ್ಕಲ್ ಕಡೆಗೆ ತೆರಳುವ ವಾಹನಗಳು ಪೊಲೀಸ್ ಠಾಣೆ ಮುಂಭಾಗದ ರಸ್ತೆ, ಸೋನಾರ ಕೆರೆ ಕ್ರಾಸ್, ಈದ್ಗಾ ಮೈದಾನ ಹಾಗೂ ಬಂದರ್ ರೋಡ್ ಮಾರ್ಗವಾಗಿ ಸಂಚರಿಸಬೇಕೆಂದು ಸೂಚಿಸಲಾಗಿದೆ.
ಜಾಲಿ, ಜಾಲಿ ಕೋಡಿ ಮತ್ತು ಜಾಲಿ ಬೀಚ್ ಕಡೆಗೆ ಹೋಗುವ ವಾಹನಗಳು ಬಂದರ್ ರೋಡ್ 2ನೇ ಕ್ರಾಸ್ ರಸ್ತೆಯನ್ನು ಬಳಸುವಂತೆ ತಿಳಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ತುರ್ತು ಹಾಗೂ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಸಾರ್ವಜನಿಕರು NH-66 ಬಳಕೆಯನ್ನು ತಪ್ಪಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಪೊಲೀಸ್ ನಿರೀಕ್ಷಕರು ಕೋರಿದ್ದಾರೆ.
