ಭಟ್ಕಳ,: ಶಿರಾಲಿಯ ಸರ್ವತೋಮುಖ ಪ್ರಗತಿಗೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದ ಖ್ಯಾತ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚೇತನ ಡಾ. ರಮೇಶ್ ಸರಾಫ್ ಅವರ ನಿಧನವು ಭಟ್ಕಳ ತಾಲೂಕಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ.

ಪತ್ರಿಕೋದ್ಯಮ, ಸಾಹಿತ್ಯ, ಮಕ್ಕಳ ಬೇಸಿಗೆ ಶಿಬಿರಗಳು, ಮಕ್ಕಳ ಯಕ್ಷಗಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ನಿಸ್ವಾರ್ಥ ಸೇವೆ ಸಲ್ಲಿಸಿ ಅನೇಕರಿಗೆ ಪ್ರೇರಣೆಯಾಗಿದ್ದರು. ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಅಪಾರ ಗೌರವಕ್ಕೆ ಪಾತ್ರರಾಗಿದ್ದರು.

ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಅವರ ಬದುಕಿನ ಪ್ರಮುಖ ಅಂಗಗಳಾಗಿದ್ದು, ಅವರ ಸರಳ ವ್ಯಕ್ತಿತ್ವ, ಸಮಾಜಮುಖಿ ಚಿಂತನೆ ಮತ್ತು ಕನ್ನಡದ ಮೇಲಿನ ಅಪಾರ ಅಭಿಮಾನ ಎಲ್ಲರ ಮನಸ್ಸಿನಲ್ಲಿ ಸದಾ ಉಳಿಯಲಿದೆ.
ಡಾ. ರಮೇಶ್ ಸರಾಫ್ ಅವರ ಅಂತಿಮ ದರ್ಶನಕ್ಕೆ ಶಿರಾಲಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 12:30ರಿಂದ 1 ಗಂಟೆಯವರೆಗೆ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದು ಎಂದು ಅವರ ಪುತ್ರ ಪರೇಶ್ ತಿಳಿಸಿದ್ದಾರೆ.
ಅವರ ಅಗಲಿಕೆಗೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.

