ಭಟ್ಕಳ: ಭಟ್ಕಳದಲ್ಲಿ ಶಿರಸಿ ಮಾರಿಕಾಂಬೆ ದೇವಸ್ಥಾನದ ಹೊರೆ ಇಡುವ “ಮುರಿನಕಟ್ಟೆ” ನಾಶಪಡಿಸಿರುವ ಕುರಿತು ಹರಡುತ್ತಿರುವ ವದಂತಿಗಳಿಗೆ ಉತ್ತರ ಕನ್ನಡ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿರುವ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ, ಸಾಂಪ್ರದಾಯಿಕವಾಗಿ ಹೊರೆ ಇಡಲಾಗುತ್ತಿರುವ ಮೂಲ “ಮುರಿನಕಟ್ಟೆ” ಯಥಾಸ್ಥಿತಿಯಲ್ಲಿದ್ದು ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ. ಹೆದ್ದಾರಿ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಅನುಕೂಲವಾಗುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಹೊಸ ಕಟ್ಟೆಯನ್ನು ಮಾತ್ರ ಕಿಡಿಗೇಡಿಗಳು ಹಾನಿಗೊಳಿಸಿರುವುದಾಗಿ ಸ್ಪಷ್ಟಪಡಿಸಲಾಗಿದೆ.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬಿ.ಎನ್.ಎಸ್.ಎಸ್ ಕಾಯ್ದೆಯ ಕಲಂ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಯಾವುದೇ ವದಂತಿಗಳು ಹಾಗೂ ತಪ್ಪು ಮಾಹಿತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಮತ್ತು ಶಾಂತಿ ಕಾಪಾಡಲು ಸಹಕರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
