ಶಿರಸಿ: ಭಟ್ಕಳ ತಾಲೂಕಿನ ಕಳಿನಕಟ್ಟೆ ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ತೆರಳಿದ್ದ ವೇಳೆ ಜಲಸಮಾಧಿಯಾದ 11 ಮಂದಿಯ ಕುಟುಂಬಗಳಿಗೆ ‘ಸಂಕಷ್ಟ ಪರಿಹಾರ ನಿಧಿ’ ಅಡಿಯಲ್ಲಿ ತಲಾ ₹15 ಲಕ್ಷಕ್ಕೂ ಅಧಿಕ ಪರಿಹಾರ ನೀಡಬೇಕು ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ–ಉತ್ತರ ಕನ್ನಡ ಆಗ್ರಹಿಸಿದೆ.

ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳಿಗೆ ಉದ್ದೇಶಿಸಿದ ಮನವಿಯನ್ನು ಶಿರಸಿ ಉಪವಿಭಾಗಾಧಿಕಾರಿಗಳ ಮೂಲಕ ಬುಧವಾರ ಸಲ್ಲಿಸಲಾಯಿತು.ಕಳೆದ ಮೇ 24ರಂದು ಕಳಿನಕಟ್ಟೆ ನದಿಯಲ್ಲಿ ಚಿಪ್ಪಿಕಲ್ಲು ತೆಗೆಯಲು ಹೋಗಿದ್ದ 14 ಮಂದಿಯ ಪೈಕಿ 9 ಮಹಿಳೆಯರು ಹಾಗೂ 2 ಪುರುಷರು ಸೇರಿ ಒಟ್ಟು 11 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಇನ್ನುಳಿದವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತ ಇಡೀ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದ್ದು, ಸಂತ್ರಸ್ತ ಕುಟುಂಬಗಳ ಆಕ್ರಂದನ ಮನಕಲಕುವಂತಿದೆ ಎಂದು ಒಕ್ಕೂಟ ತಿಳಿಸಿದೆ.
ಮೃತಪಟ್ಟವರು ಜೀವನೋಪಾಯಕ್ಕಾಗಿ ಕಪ್ಪೆಚಿಪ್ಪು ಸಂಗ್ರಹಣೆ, ಮೀನುಗಾರಿಕೆ, ಕೃಷಿ ಕೂಲಿ, ರೈಸ್‌ಮಿಲ್ ಕಾರ್ಮಿಕ ಕೆಲಸ ಹಾಗೂ ಆಶಾ ಕಾರ್ಯಕರ್ತೆಯರಾಗಿ ದುಡಿಯುತ್ತಿದ್ದರು. ರಾಜ್ಯ ಸರ್ಕಾರ ಈಗಾಗಲೇ ₹5 ಲಕ್ಷ ಹಾಗೂ ಕೇಂದ್ರ ಸರ್ಕಾರ ₹2 ಲಕ್ಷ ಪರಿಹಾರ ಘೋಷಿಸಿರುವುದಾದರೂ, ದುಡಿಯುವ ಸದಸ್ಯರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಅದು ಸಾಕಾಗುವುದಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ವಯೋವೃದ್ಧರು ಮತ್ತು ಮಕ್ಕಳೇ ಉಳಿದಿರುವ ಈ ಕುಟುಂಬಗಳಿಗೆ ಬದುಕು ನಡೆಸುವುದು ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ, ಮೀನುಗಾರಿಕಾ ದುರಂತಗಳಿಗೆ ನೀಡುವ ಮಾದರಿಯಲ್ಲಿ ಪ್ರತಿ ಕುಟುಂಬಕ್ಕೂ ಕನಿಷ್ಠ ₹15 ಲಕ್ಷಕ್ಕೂ ಅಧಿಕ ಪರಿಹಾರ ನೀಡುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ. ನಾಗೇಶ ನಾಯ್ಕ ಕಾಗಾಲ, ಕರ್ನಾಟಕ ಆಟೋ ಯೂನಿಯನ್ ರಾಜ್ಯ ಉಪಾಧ್ಯಕ್ಷ ವಿಶ್ವನಾಥ ಎಸ್. ಗೌಡ, ತಾಲೂಕು ಸಂಚಾಲಕ ರಾಜೇಶ ದೇಶಭಾಗ್, ನ್ಯಾಯವಾದಿ ಶಿವರಾಜ ಎಸ್. ದೇಸಾಯಿ, ಶಿವಾನಂದ ಪುಟ್ಟಪ್ಪ ನಾಯ್ಕ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
