ಭಟ್ಕಳ : ತಾಲೂಕಿನ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಮುರಿನಕಟ್ಟೆ ಸ್ಥಳಾಂತರ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ, ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 5 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದ್ದು, 40 ಮಂದಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆ ಇಡುವ ಮೂಲ ಮುರಿನಕಟ್ಟೆಯನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಇದರ ಅಂಗವಾಗಿ ಹೆದ್ದಾರಿ ಪಕ್ಕದ ಸರ್ಕಾರಿ ಜಾಗದಲ್ಲಿ ಹೊಸ ಕಟ್ಟೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು.ಆದರೆ ಮೇ 24ರ ರಾತ್ರಿ ಕೆಲ ಕಿಡಿಗೇಡಿಗಳು ಅಕ್ರಮ ಕೂಟ ರಚಿಸಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ತಡೆ ಒಡ್ಡಿದರೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ನಿರ್ಮಾಣ ಹಂತದಲ್ಲಿದ್ದ ಕಟ್ಟೆಯನ್ನು ಧ್ವಂಸಗೊಳಿಸಲು ಯತ್ನಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರ ಮೇಲೆಯೇ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಸಾರ್ವಜನಿಕರೊಬ್ಬರ ಫೋನ್ ಕಸಿದುಕೊಂಡು ಹಲ್ಲೆ ನಡೆಸಿರುವುದಾಗಿಯೂ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಪ್ರಚೋದನಾಕಾರಿ ವಿಡಿಯೋ ಹರಿಬಿಟ್ಟ ಆರೋಪಿ ಬಂಧನ:
ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ವಿಡಿಯೋ ಹರಿಬಿಟ್ಟ ಆರೋಪದ ಮೇಲೆ ಭಟ್ಕಳದ ಆಜಾದ್ ನಗರದ ಮೊತೀಬ್ ಮಹಮ್ಮದ್ ಮಹಮ್ಮದ್ ಅಶ್ರಫ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್:
ಪ್ರಸ್ತುತ ಭಟ್ಕಳ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 850ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತೆಗಾಗಿ 4 ಪೊಲೀಸ್ ಅಧೀಕ್ಷಕರು, 10 ಉಪಾಧೀಕ್ಷಕರು, 20 ನಿರೀಕ್ಷಕರು, 37 ಉಪನಿರೀಕ್ಷಕರು, 31 ಸಹಾಯಕ ಉಪನಿರೀಕ್ಷಕರು, 294 ಪೊಲೀಸ್ ಸಿಬ್ಬಂದಿ, 10 ಡಿಎಆರ್ ತುಕಡಿಗಳು ಹಾಗೂ ಕೆಎಸ್‌ಆರ್‌ಪಿ ಮತ್ತು ಸ್ಪೆಷಲ್ ಆ್ಯಕ್ಷನ್ ಫೋರ್ಸ್‌ನ 7 ತುಕಡಿಗಳನ್ನು ನಿಯೋಜಿಸಲಾಗಿದೆ.
ನಗರದಲ್ಲಿ ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು ಶಾಂತಿಯುತವಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಸುಳ್ಳು ವದಂತಿಗಳಿಗೆ
ಕಿವಿಗೊಡಬೇಡಿ: ಪೊಲೀಸರ ಮನವಿ:
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಅಥವಾ ಪ್ರಚೋದನಾಕಾರಿ ಸಂದೇಶ ಹರಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
