ಭಟ್ಕಳ: ಆಹಾರ ಪದ್ಧತಿ ಮತ್ತು ಆರೋಗ್ಯದ ನಡುವಿನ ಸಂಬಂಧದ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಪದ್ಮಶ್ರೀ ಪುರಸ್ಕೃತ ಆಹಾರ ವಿಜ್ಞಾನಿ ಹಾಗೂ ಪೌಷ್ಟಿಕಾಂಶ ತಜ್ಞ ಡಾ. ಖಾದರ್ ವಲಿ ಅವರ ವಿಶೇಷ ಉಪನ್ಯಾಸ ಕಾರ್ಯಕ್ರಮ ಭಟ್ಕಳದಲ್ಲಿ ಆಯೋಜಿಸಲಾಗಿದೆ.

“ಆಹಾರವೇ ಆರೋಗ್ಯ” ಎಂಬ ವಿಷಯದಡಿ ನಡೆಯಲಿರುವ ಈ ಕಾರ್ಯಕ್ರಮವು ಮೇ 31ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದ ನಾಗಯಕ್ಷೆ ಸಭಾಭವನದಲ್ಲಿ ನಡೆಯಲಿದೆ.
ಸ್ಪಂದನ ಸಂಸ್ಥೆ ಭಟ್ಕಳದ ನೇತೃತ್ವದಲ್ಲಿ ಕ್ರಿಯಾಶೀಲ ಗೆಳೆಯರ ಸಂಘ, ಲಯನ್ಸ್ ಕ್ಲಬ್ ಮುರುಡೇಶ್ವರ, ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಜಾಲಿ, ಸರ್ಪನಕಟ್ಟೆ ಕಟ್ಟೆ ಸ್ಪೋರ್ಟ್ಸ್ ಕ್ಲಬ್, ಶ್ರೀ ಕನ್ನಿಕಾ ಪರಮೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘ ಮಾವಿನಕಟ್ಟೆ, ಶ್ರೀ ದುರ್ಗಾ ಯುವಕ ಮಂಡಲ ಅಳವೆಕೊಡಿ, ಪ್ರೀತಿ ಸ್ಪೋರ್ಟ್ಸ್ ಕ್ಲಬ್ ಶಿರಾಲಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಭಟ್ಕಳ ಹಾಗೂ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.

ಆಹಾರ ವಿಜ್ಞಾನ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಡಾ. ಖಾದರ್ ವಲಿ ಅವರು ಅಮೆರಿಕಾದಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ ಭಾರತಕ್ಕೆ ಮರಳಿ ಆರೋಗ್ಯ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿರಿಧಾನ್ಯಗಳ ಪೌಷ್ಟಿಕ ಮೌಲ್ಯ ಮತ್ತು ಆರೋಗ್ಯಕರ ಆಹಾರ ಪದ್ಧತಿಯ ಕುರಿತು ಜನರಲ್ಲಿ ಅರಿವು ಮೂಡಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದು, ಈ ಕಾರಣದಿಂದ “ಮಿಲ್ಲೆಟ್ ಮ್ಯಾನ್ ಆಫ್ ಇಂಡಿಯಾ” ಎಂಬ ಹೆಸರಿನಿಂದಲೂ ಪ್ರಸಿದ್ಧರಾಗಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರವು 2023ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಉಪನ್ಯಾಸದ ವೇಳೆ ಸಿರಿಧಾನ್ಯಗಳ ಬಳಕೆ, ಸಮತೋಲಿತ ಆಹಾರ ಕ್ರಮ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ವಿಚಾರಗಳ ಕುರಿತು ಅವರು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಜೊತೆಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುವ ಸಂವಾದ ಕಾರ್ಯಕ್ರಮವೂ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಶಾಸಕ ಮಂಕಾಳ್ ವೈದ್ಯ ಉದ್ಘಾಟಿಸಲಿದ್ದಾರೆ. ನಾಗಯಕ್ಷೆ ಮಹಾಸತಿ ಧರ್ಮದೇವಿ ಸಂಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಕುರಿತು ಆಸಕ್ತಿ ಹೊಂದಿರುವ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ 63612 73142 ಸಂಖ್ಯೆಯನ್ನು ಸಂಪರ್ಕಿಸಬಹುದು.
