
ಭಟ್ಕಳ: ಕಳೆದ ಕೆಲವು ತಿಂಗಳುಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಮೂರಿನಕಟ್ಟೆ ವಿಚಾರಕ್ಕೆ ಅಂತಿಮ ತೆರೆ ಬೀಳುವ ಸಾಧ್ಯತೆ ಮೂಡಿದೆ. ಮುರಿತಕ್ಕೊಳಗಾಗಿದ್ದ ಮೂರಿನಕಟ್ಟೆಯನ್ನು ಅದರ ಮೂಲ ಸ್ಥಳದಲ್ಲೇ ಮರುನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳಲಿದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳೊಂದಿಗೆ ಹಲವು ಸುತ್ತಿನ ಚರ್ಚೆಗಳು ನಡೆದಿವೆ. ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ ಹೆದ್ದಾರಿಯ ರಸ್ತೆ ವಿಭಜಕ (ಡಿವೈಡರ್) ಭಾಗದಲ್ಲಿದ್ದ ಮೂಲ ಮೂರಿನಕಟ್ಟೆಯನ್ನು ಯಥಾಸ್ಥಿತಿಯಲ್ಲಿ ಮರುಸ್ಥಾಪಿಸಲು ಒಪ್ಪಿಗೆ ದೊರೆತಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಸಂದರ್ಭದಲ್ಲಿ ಮೂರಿನಕಟ್ಟೆಯನ್ನು ಸ್ಥಳಾಂತರಿಸಿ ಹೆದ್ದಾರಿ ಪಕ್ಕದಲ್ಲಿ ಹೊಸದಾಗಿ ನಿರ್ಮಿಸಲಾಗಿತ್ತು. ಬಳಿಕ ಆ ಕಟ್ಟಡವನ್ನು ಕೆಲವರು ಧ್ವಂಸಗೊಳಿಸಿದ ಘಟನೆ ನಡೆದಿದ್ದು, ಆ ವೇಳೆ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಕೆಲವು ಅಹಿತಕರ ಘಟನೆಗಳೂ ಸಂಭವಿಸಿದ್ದವು. ಈ ಘಟನೆಯನ್ನು ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ ಮೂರಿನಕಟ್ಟೆ ಮರುನಿರ್ಮಾಣಕ್ಕೆ ಒತ್ತಾಯಿಸಿದ್ದರು.
ಪ್ರತಿಭಟನೆಗೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ದಾಖಲಾಗಿದ್ದರೂ, ಬಳಿಕ ವಿಷಯವನ್ನು ಕಾನೂನುಬದ್ಧ ಹಾಗೂ ಶಾಂತಿಯುತ ಮಾರ್ಗದಲ್ಲಿ ಪರಿಹರಿಸಲು ನಿರಂತರ ಪ್ರಯತ್ನಗಳು ನಡೆದವು. ವಿವಿಧ ಹಂತದ ಸಭೆಗಳು ಮತ್ತು ಸಮಾಲೋಚನೆಗಳ ಬಳಿಕ ಮೂರಿನಕಟ್ಟೆಯನ್ನು ಅದರ ಮೂಲ ಸ್ಥಳದಲ್ಲೇ ಮರುನಿರ್ಮಿಸುವ ಕುರಿತು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಗೇರಿ ವಿವರಿಸಿದರು.

ವಿವಾದಿತ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಉದ್ದೇಶದಿಂದ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಆಡಳಿತಾತ್ಮಕ ಕ್ರಮಗಳ ಮೂಲಕವೇ ಮುಂದಿನ ಪ್ರಕ್ರಿಯೆ ಸಾಗಲಿದ್ದು, ಸಾರ್ವಜನಿಕರಲ್ಲಿ ಶಾಂತಿ ಮತ್ತು ಪರಸ್ಪರ ಸಹಕಾರ ಕಾಪಾಡಿಕೊಳ್ಳುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ್ ಸೇರಿದಂತೆ ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ್, ಶ್ರೀಕಾಂತ್ ನಾಯ್ಕ್ ಹಾಗೂ ಇತರರು ಉಪಸ್ಥಿತರಿದ್ದರು.
