ಭಟ್ಕಳ, ಜೂನ್ : ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಭಟ್ಕಳ–ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ಎಸ್. ವೈದ್ಯ ಅವರಿಗೆ ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಜವಾಬ್ದಾರಿಯನ್ನು ಮತ್ತೆ ವಹಿಸಿಕೊಡಬೇಕು ಎಂದು ಮೋಗೇರ ಸಮಾಜ ಹಾಗೂ ವಿವಿಧ ಮೀನುಗಾರ ಸಂಘಟನೆಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.

ಭಟ್ಕಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೋಗೇರ, ಮಂಕಾಳ ವೈದ್ಯ ಅವರು ಹಿಂದಿನ ಅವಧಿಯಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ವೇಳೆ ಕರಾವಳಿ ಭಾಗದ ಅಭಿವೃದ್ಧಿಗೆ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದರು ಎಂದು ತಿಳಿಸಿದರು.
ಮೀನುಗಾರರ ಹಿತಾಸಕ್ತಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ, ಸಣ್ಣ ಬಂದರುಗಳ ಅಭಿವೃದ್ಧಿ ಹಾಗೂ ಮೀನುಗಾರ ಸಮುದಾಯದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಅವರು ಆದ್ಯತೆ ನೀಡಿದ್ದರು ಎಂದು ಹೇಳಿದರು. ಸಮುದ್ರದಲ್ಲಿ ಸಂಭವಿಸುವ ಅಪಘಾತಗಳು, ಪ್ರಾಣಹಾನಿ ಹಾಗೂ ದೋಣಿ-ಬೋಟ್ ಹಾನಿಯಂತಹ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಪರಿಹಾರ ದೊರಕುವಂತೆ ತ್ವರಿತ ಕ್ರಮ ಕೈಗೊಳ್ಳುವಲ್ಲಿ ಅವರು ವಿಶೇಷ ಗಮನ ಹರಿಸಿದ್ದರು ಎಂದು ವಿವರಿಸಿದರು.
ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸಣ್ಣ ಸಮುದಾಯಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಪರಂಪರೆಯನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತ ಬಂದಿದೆ. ಅದೇ ಮನೋಭಾವದೊಂದಿಗೆ ಮಂಕಾಳ ವೈದ್ಯ ಅವರಿಗೆ ಮತ್ತೊಮ್ಮೆ ಮೀನುಗಾರಿಕೆ ಮತ್ತು ಬಂದರು ಖಾತೆಯನ್ನು ನೀಡುವ ಕುರಿತು ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋಗೇರ ಸಮಾಜದ ಉಪಾಧ್ಯಕ್ಷ ಭಾಸ್ಕರ ಮೋಗೇರ ಬೆಳಕೆ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಮಂಕಾಳ ವೈದ್ಯ ಅವರು ತೋರಿದ ಜನಪರ ನಿಲುವು ಮತ್ತು ಕಾರ್ಯಶೈಲಿ ಜನರಲ್ಲಿ ವಿಶ್ವಾಸ ಮೂಡಿಸಿದೆ ಎಂದು ಹೇಳಿದರು. ಈ ಸಂಬಂಧ ಸಮಾಜದ ಪ್ರತಿನಿಧಿಗಳ ನಿಯೋಗವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ ಅಧಿಕೃತ ಮನವಿ ಸಲ್ಲಿಸಲು ತೀರ್ಮಾನಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೋಗೇರ ಸಮಾಜದ ಕಾರ್ಯದರ್ಶಿ ಭಾಸ್ಕರ ದೈಮನೆ, ಖಜಾಂಚಿ ನಾರಾಯಣ ಚೊಬ್ಬಿಮನೆ, ಮೋಗೇರ ಹೋರಾಟ ಸಮಿತಿ ಅಧ್ಯಕ್ಷ ಎಫ್.ಕೆ. ಮೋಗೇರ, ಮುಖಂಡ ದೇವಿದಾಸ ಮೋಗೇರ, ನೌಕರರ ಮತ್ತು ಪದವೀಧರರ ಸಂಘದ ಅಧ್ಯಕ್ಷ ವಿ.ಡಿ. ಮೋಗೇರ, ತೆಂಗಿನಗುಂಡಿ ಹಾಗೂ ಅಳ್ವೆಕೋಡಿ ಪರ್ಶಿಯನ್ ಬೋಟ್ ಯೂನಿಯನ್ ಅಧ್ಯಕ್ಷ ವೆಂಕಟರಮಣ ಸಣ್ಣಿಮನೆ, ವಕೀಲ ನಾಗರಾಜ ಈ.ಎಚ್. ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
