ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಕುಟುಂಬದ ಸದಸ್ಯರ ವಿರುದ್ಧ ಭಟ್ಕಳ ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವೆಂಕಟಾಪುರ ಹೊಳೆ ಪ್ರದೇಶದಲ್ಲಿ ಪರಿಸರ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿದೆ. ಈ ಸಂಬಂಧ ಸ್ಥಳೀಯ ನಿವಾಸಿಗಳು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿದುಬಂದಿದೆ.

ಗ್ರಾಮಸ್ಥರ ಆರೋಪದ ಪ್ರಕಾರ, ವೆಂಕಟಾಪುರ ಹೊಳೆ ಸಮೀಪ ರೆಸಾರ್ಟ್ ನಿರ್ಮಾಣಕ್ಕೆ ಸಂಬಂಧಿಸಿದ ಚಟುವಟಿಕೆಗಳ ವೇಳೆ ಕೆಲವು ಕಾಡುಮರಗಳನ್ನು ತೆರವುಗೊಳಿಸಲಾಗಿದ್ದು, ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳನ್ನು ಉಲ್ಲಂಘಿಸಿ ಹೊಳೆ ಪ್ರದೇಶದಲ್ಲಿ ಕೆಂಪು ಮಣ್ಣು ಹಾಕಲಾಗಿದೆ ಎನ್ನಲಾಗಿದೆ.
ಸ್ಥಳೀಯರ ಹೇಳಿಕೆಯಂತೆ, ಈ ಕ್ರಮದಿಂದ ಜಲಚರಗಳ ವಾಸಸ್ಥಳಕ್ಕೆ ಹಾನಿಯಾಗುವ ಸಾಧ್ಯತೆ ಉಂಟಾಗಿದ್ದು, ಹೊಳೆಯ ಸಹಜ ನೀರಿನ ಹರಿವಿನ ಮೇಲೂ ಪರಿಣಾಮ ಬೀರಿದೆ. ಮಳೆಗಾಲದ ಸಂದರ್ಭದಲ್ಲಿ ನೀರಿನ ಹರಿವಿಗೆ ಅಡ್ಡಿಯಾಗುವುದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಎದುರಾಗುವ ಆತಂಕ ವ್ಯಕ್ತವಾಗಿದೆ.
ದೂರಿನಲ್ಲಿ ಸಚಿವ ಮಂಕಾಳು ವೈದ್ಯ ಅವರ ಪುತ್ರಿ ಬೀನಾ ವೈದ್ಯ ಹಾಗೂ ಅವರ ಸಹೋದರ ಈರಪ್ಪ ಸುಬ್ಬ ಮೊಗೇರ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಹೊಳೆ ಪ್ರದೇಶದಲ್ಲಿ ಹಾಕಿರುವ ಮಣ್ಣನ್ನು ತಕ್ಷಣ ತೆರವುಗೊಳಿಸುವಂತೆ ಹಾಗೂ ಪರಿಸರ ಹಾನಿ ಉಂಟುಮಾಡಿರುವ ಕುರಿತು ಸಮಗ್ರ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಡಳಿತವನ್ನು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಸಂಭವಿಸಿದ ಕೆಲವು ಪ್ರಕೃತಿ ವಿಕೋಪ ಮತ್ತು ಅನಾಹುತಗಳಿಗೆ ಹೊಳೆಯ ಸ್ವಾಭಾವಿಕ ಹರಿವಿನಲ್ಲಿ ಉಂಟಾದ ಅಡಚಣೆಗಳು ಕಾರಣವಾಗಿರಬಹುದೆಂಬ ಅನುಮಾನವನ್ನೂ ಸ್ಥಳೀಯರು ತಮ್ಮ ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ. ಈ ಆರೋಪಗಳ ಕುರಿತು ಸಂಬಂಧಪಟ್ಟವರ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.
