ಭಟ್ಕಳ: ಗೋಕರ್ಣದಿಂದ ಭಟ್ಕಳದ ಕಡೆಗೆ ಸಂಚರಿಸುತ್ತಿದ್ದ ರೈಲಿನಲ್ಲಿ 18 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೃತ ವಿದ್ಯಾರ್ಥಿಯನ್ನು ಭಟ್ಕಳದ ಹೆಬಳೆಯ ಬುಸಾರಮನೆಯ ನಿವಾಸಿ ಯತೀನ್ ಲಕ್ಷ್ಮಣ ಮೊಗೇರ್ ಎಂದು ಗುರುತಿಸಲಾಗಿದೆ.

ಜೂನ್ 12ರ ಸಂಜೆ ಯತೀನ್ ಅವರು ಗೋಕರ್ಣದಿಂದ ಭಟ್ಕಳದ ಕಡೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ನುಶಿಕೋಟೆ ಸಮೀಪ ತಲುಪಿದ ವೇಳೆ ಅವರು ರೈಲಿನಿಂದ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಂಜೆ ಸುಮಾರು 5.30ರಿಂದ 7.30ರ ನಡುವಿನ ಅವಧಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಇದು ಅಪಘಾತ ಅಥವಾ ಆತ್ಮಹತ್ಯೆ ಅಲ್ಲ ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೃತ ವಿದ್ಯಾರ್ಥಿಯ ತಂದೆ ಲಕ್ಷ್ಮಣ ನಾರಾಯಣ ಮೊಗೇರ್ ಮಾತನಾಡಿ, “ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವನಲ್ಲ. ಕಾಲು ಜಾರಿ ಬೀಳುವ ಸಾಧ್ಯತೆಯೂ ಕಡಿಮೆ. ಸಹ ಪ್ರಯಾಣಿಕರೇ ರೈಲಿನಿಂದ ದೂಡಿ ಕೊಲೆ ಮಾಡಿರುವ ಶಂಕೆ ಇದೆ. ಸಮಗ್ರ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.
ಘಟನೆ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಘಟನೆಯ ನಿಖರ ಕಾರಣ ತನಿಖೆಯ ನಂತರವೇ ಸ್ಪಷ್ಟವಾಗಲಿದೆ.
