
ಕಾರವಾರ,: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಮಾಜಿ ರೌಡಿ ಶೀಟರ್ ಒಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್ ಅವರ ಆದೇಶದಂತೆ ಹಳಿಯಾಳ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ ಮಬನೂರು ಅವರನ್ನು ಅಮಾನತು ಮಾಡಲಾಗಿದ್ದು, ಠಾಣೆಯ 8 ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಜೂನ್ 14ರ ರಾತ್ರಿ ಹಳಿಯಾಳದ ಮೌರ್ಯ ಬಾರ್ ಮತ್ತು ರೆಸ್ಟೋರೆಂಟ್ ಎದುರು ಮಾಜಿ ರೌಡಿ ಶೀಟರ್ ಮಂಜುನಾಥ ಸುಬ್ರಾಯ ಬೇಕನಿ ಅಲಿಯಾಸ್ ‘ಮಚ್ಚ್ ಮಂಜಾ’ ಮದ್ಯದ ಅಮಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸುತ್ತಿದ್ದನೆಂದು ತಿಳಿದುಬಂದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿದ ವೇಳೆ ಆರೋಪಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಘಟನೆಯಲ್ಲಿ ಕರ್ತವ್ಯದಲ್ಲಿದ್ದ ಕೆಲ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರ ಮೇಲೆಯೂ ಹಲ್ಲೆ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಘಟನೆಯ ವೇಳೆ ಸ್ಥಳದಲ್ಲಿದ್ದ ಪಿಎಸ್‌ಐ ಬಸವರಾಜ ಮಬನೂರು ಅವರು ಸಿಬ್ಬಂದಿಯ ನೆರವಿಗೆ ಧಾವಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಲಾಖಾ ಮಟ್ಟದಲ್ಲಿ ಆಂತರಿಕ ತನಿಖೆ ನಡೆಸಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.ಇದರೊಂದಿಗೆ ಪ್ರಕರಣ ಸಂಬಂಧ ಪೊಲೀಸರ ಮೇಲಿನ ದಾಳಿ ಹಾಗೂ ಕರ್ತವ್ಯ ಲೋಪ ಎರಡೂ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
