ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಮಹಿಳಾ ಸಹೋದ್ಯೋಗಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಕಾರಿನಲ್ಲಿ ಕರೆದೊಯ್ದ ಆರೋಪದ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆ ಮತ್ತು ರಾಜಕೀಯ ಚರ್ಚೆಗಳು ನಡೆಯುತ್ತಿವೆ.

ಮಾಹಿತಿಯ ಪ್ರಕಾರ, ಭಟ್ಕಳದ ಖಾಸಗಿ ಸೂಪರ್ ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಹಿಂಧೂ ಯುವತಿ ಹಾಗೂ ಸಹೋದ್ಯೋಗಿ ಮುಸ್ಲಿಂ ಯುವಕ ನಡುವೆ ಪರಿಚಯವಿತ್ತು ಎನ್ನಲಾಗಿದೆ. ಆರೋಪಿಯು ಕಳೆದ ಕೆಲವು ದಿನಗಳಿಂದ ಯುವತಿಯನ್ನು ಸಂಪರ್ಕಿಸುತ್ತಿದ್ದ ಹಾಗೂ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಜೂನ್ 17ರಂದು ಮಾತನಾಡಬೇಕಿದೆ ಎಂದು ಹೇಳಿ ಯುವತಿಯನ್ನು ಸೂಪರ್ ಮಾರ್ಟ್ ಹಿಂಭಾಗದ ಪ್ರದೇಶಕ್ಕೆ ಕರೆಸಿಕೊಂಡ ಆರೋಪಿಯು, ಬಳಿಕ ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಸ್ಥಳದಿಂದ ಕಾಡಿನತ್ತ ತೆರಳಿದ್ದಾನೆ ಎಂದು ಆರೋಪಿಸಲಾಗಿದೆ.
ಮಾರುಕೇರಿ ಭಾಗದ ಕಡೆಗೆ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಕಾರನ್ನು ಸ್ಥಳೀಯರು ಗಮನಿಸಿ ತಡೆದಿದ್ದಾರೆ ಎನ್ನಲಾಗಿದೆ. ನಂತರ ಯುವತಿ ತನ್ನನ್ನು ಇಚ್ಛೆಗೆ ವಿರುದ್ಧವಾಗಿ ಕಾರಿನಲ್ಲಿ ಕರೆದೊಯ್ದು ಕಿರುಕುಳ ನೀಡಲು ಯತ್ನಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಆರಂಭಿಕ ಹಂತದಲ್ಲಿ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ಇದನ್ನು ವಿರೋಧಿಸಿ ಬಿಜೆಪಿ ಹಾಗೂ ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಬಳಿಕ ಯುವತಿಯ ಲಿಖಿತ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಶಾಹಿದ್ ಸೈಫ್ ಖಾನ್ ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಘಟನೆಯ ಎಲ್ಲಾ ಅಂಶಗಳ ಪರಿಶೀಲನೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
