
ಸಿದ್ದಾಪುರ: ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಹಾಗೂ ಸಿದ್ದಾಪುರ ಪಿಐ ಸೀತಾರಾಮ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಸಿದ್ದಾಪುರದಲ್ಲಿ ಭಾರೀ ಪ್ರಮಾಣದ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಮಹಿಳಾ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ಸಿದ್ದಾಪುರ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಮಾತನಾಡಿ, ಪೊಲೀಸ್ ಅಧಿಕಾರಿಗಳಿಂದ ನಿರಂತರ ಕಿರುಕುಳವಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಲಿಖಿತ ದೂರು ನೀಡಿರುವುದಾಗಿ ತಿಳಿಸಿದರು.
ತಮ್ಮ ಹಾಗೂ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ನಡೆದಿದ್ದು, ಈ ಸಂಬಂಧ ದೂರು ನೀಡಿದ ಬಳಿಕ ತನಿಖೆಯಲ್ಲಿ ವ್ಯಕ್ತಿಯೊಬ್ಬರ ಹೆಸರು ಪತ್ತೆಯಾದರೂ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದರು. ಪ್ರಕರಣ ದಾಖಲಾಗಿದ್ದರೂ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿಲ್ಲ ಎಂದು ಆರೋಪಿಸಿದರು.

ಅಲ್ಲದೆ, ಡಿವೈಎಸ್ಪಿ ಹಾಗೂ ಪಿಐ ತಮ್ಮನ್ನು ಹಲವು ಬಾರಿ ಕರೆಯಿಸಿ ಒತ್ತಡ ಹೇರಿದ್ದಾರೆ ಹಾಗೂ ಮನೆಗೆ ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಿ ಕಿರುಕುಳ ನೀಡಲಾಗಿದೆ ಎಂದು ವಸಂತ ನಾಯ್ಕ ಆರೋಪಿಸಿದರು.
ಸಿದ್ದಾಪುರ ವ್ಯಾಪ್ತಿಯಲ್ಲಿ ನಡೆದ ಕೆಲವು ಕೊಲೆ, ಹಲ್ಲೆ, ಆತ್ಮಹತ್ಯೆ ಹಾಗೂ ಹಿಟ್ ಆಂಡ್ ರನ್ ಪ್ರಕರಣಗಳ ತನಿಖೆಯಲ್ಲಿ ಲೋಪಗಳಾಗಿವೆ ಎಂದು ಪ್ರತಿಭಟನಾಕಾರರು ದೂರಿದರು. ಪೊಲೀಸ್ ಇಲಾಖೆ ನ್ಯಾಯ ಕೇಳಿ ಬಂದವರ ಮೇಲೆಯೇ ಪ್ರಕರಣ ದಾಖಲಿಸುತ್ತಿದೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸಂಬಂಧಿತ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

