ಭಟ್ಕಳ: ತಾಲೂಕಿನ ಪಡುಶಿರಾಲಿಯಲ್ಲಿ ಕೆಲವು ದಿನಗಳ ಹಿಂದೆ ಚಿಪ್ಪಿಕಲ್ಲು ತೆಗೆಯಲು ನದಿಗೆ ತೆರಳಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಮೃತಪಟ್ಟ 11 ಮಂದಿಯ ಕುಟುಂಬಗಳ ಮಕ್ಕಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಮಾನವೀಯ ನೆಲೆಯಲ್ಲಿ ನೆರವಿನ ಹಸ್ತ ಚಾಚಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂತ್ರಸ್ತ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ 15 ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕವಾದ ವಿವಿಧ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಬಟ್ಟೆ, ಶಾಲಾ ಬ್ಯಾಗ್, ನೋಟ್‌ಬುಕ್, ಕಂಪಾಸ್ ಬಾಕ್ಸ್, ರೇನ್‌ಕೋಟ್, ಛತ್ರಿ, ಥರ್ಮಸ್, ವಾಟರ್ ಬಾಟಲ್, ರೈಟಿಂಗ್ ಪ್ಯಾಡ್, ಪೆನ್ನು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ, “ನಡೆದ ಘಟನೆ ಅತ್ಯಂತ ದುಃಖಕರ. ಕಳೆದುಕೊಂಡ ಪಾಲಕರನ್ನು ಮರಳಿ ತರುವ ಶಕ್ತಿ ಯಾರಿಗೂ ಇಲ್ಲ. ಆದರೆ ಮಕ್ಕಳ ಭವಿಷ್ಯ ಗಟ್ಟಿಯಾಗಬೇಕಾದರೆ ಶಿಕ್ಷಣವನ್ನು ಯಾವುದೇ ಕಾರಣಕ್ಕೂ ಮಧ್ಯದಲ್ಲೇ ನಿಲ್ಲಿಸದೆ ಪೂರ್ಣಗೊಳಿಸಬೇಕು. ಉತ್ತಮ ಶಿಕ್ಷಣದ ಮೂಲಕ ಉದ್ಯೋಗ ಪಡೆದು ಬದುಕಿನಲ್ಲಿ ಭದ್ರತೆ ಸಾಧಿಸುವುದೇ ಪಾಲಕರಿಗೆ ಸಲ್ಲಿಸುವ ನಿಜವಾದ ಗೌರವ,” ಎಂದು ಹೇಳಿದರು.

ಅಲ್ಲದೆ, “ನಾವು ಮಾನವೀಯತೆ ಮತ್ತು ಮಾನಸಿಕ ಬೆಂಬಲದೊಂದಿಗೆ ನಿಮ್ಮೊಂದಿಗೆ ಇರುತ್ತೇವೆ” ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ, ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ ಕೆರೆಕಟ್ಟೆ, ಸಾಹಿತಿಗಳಾದ ಮಾನಸುತ ಶಂಭು ಹೆಗಡೆ, ಶ್ರೀಧರ ಶೇಟ್, ಜಿಲ್ಲಾ ಪದಾಧಿಕಾರಿ ಪಿ.ಎಂ. ಮುಕ್ರಿ, ಪತ್ರಕರ್ತರಾದ ವಿಷ್ಣುದೇವಡಿಗ, ಅಕ್ಷಯಗಿರಿ ಗೋಸಾವಿ, ಮಂಜುನಾಥ ಅಂಬಿಗೇರ ಹಾಗೂ ಊರ ಪ್ರಮುಖರು ಮತ್ತು ವಿದ್ಯಾರ್ಥಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ತನ್ಮಯಿ, ಯುಗ, ಯಾಮಿನಿ, ಯಶಸ್ವಿ, ಕಾಂಚನ, ಸಿಂಚನಾ, ಚೇತನಾ, ತಮನ್ನ, ಸೋನಿಯಾ, ಕೌಶಿಕ, ಉನ್ನತಿ, ಉಲ್ಲಾಸ, ಕೀರ್ತನಾ ಮತ್ತು ಸವಿತಾ ಭಾಗವಹಿಸಿದ್ದರು.
