
ಭಟ್ಕಳ: ಉದ್ಯೋಗ ಅರಸಿ ಏಳು ತಿಂಗಳ ಹಿಂದೆ ಬೆಂಗಳೂರಿಗೆ ತೆರಳಿದ್ದ ಭಟ್ಕಳ ಮೂಲದ ಯುವತಿ ಕೆ.ಆರ್. ಪುರಂ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೃತರನ್ನು ತಾಲೂಕಿನ ಬೆಳಕೆ ಗ್ರಾಮದ ಕಾನುಬದ್ಲು ಬೊಮ್ಮನಕೆರೆಯ ನಿವಾಸಿ ದೀಪಾಲಿ ಗುರು ಗೊಂಡ (22) ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗ ದೊರೆತ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು.ಇತ್ತೀಚೆಗೆ ಸಹೋದ್ಯೋಗಿಯೊಬ್ಬರ ಮದುವೆಗೆ ಸ್ನೇಹಿತರೊಂದಿಗೆ ಟಿಟಿ ವಾಹನದಲ್ಲಿ ತೆರಳಿದ್ದರು. ಮದುವೆ ಕಾರ್ಯಕ್ರಮ ಮುಗಿಸಿ ಮರಳುವ ವೇಳೆ ಕೆ.ಆರ್. ಪುರಂ ಬಳಿ ಟಿಟಿ ವಾಹನ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಚಾಲಕ ಪ್ರಯಾಣಿಕರನ್ನು ಕೆಳಗಿಳಿಯುವಂತೆ ಸೂಚಿಸಿದ್ದಾನೆ ಎನ್ನಲಾಗಿದೆ.

ಆದರೆ ಕೊನೆಯ ಮೂವರು ಪ್ರಯಾಣಿಕರು ವಾಹನದಲ್ಲೇ ಉಳಿದಿದ್ದು, ಅವರಲ್ಲಿ ದೀಪಾಲಿ ಕೂಡ ಒಬ್ಬರಾಗಿದ್ದರು. ಇದೇ ವೇಳೆ ವೇಗವಾಗಿ ಬಂದ ಲಾರಿಯೊಂದು ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ ದೀಪಾಲಿ ವಾಹನದೊಳಗೆ ಸಿಲುಕಿಕೊಂಡಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ.
ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ದೀಪಾಲಿ ಮೃತಪಟ್ಟಿದ್ದಾರೆ.

ಮತ್ತೊಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ಬಳಿಕ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಆಂಬುಲೆನ್ಸ್ ಹಾಗೂ ರಕ್ಷಣಾ ಕಾರ್ಯಾಚರಣೆಗೆ ತೊಂದರೆ ಉಂಟಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ದೀಪಾಲಿ ಅವರ ನಿಧನದಿಂದ ಕುಟುಂಬದವರಲ್ಲಿ ಆಕ್ರಂದನ ಮೇಳೈಸಿದೆ.

