
ಶಿರಸಿ, ಉತ್ತರ ಕನ್ನಡ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಆರೋಪ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಟಗುಳಿ ಗ್ರಾಮದ ಇಡ್ತಳ್ಳಿ ಪ್ರದೇಶದಲ್ಲಿ ಕೇಳಿಬಂದಿದೆ. ಮೃತರನ್ನು ಪರಮೇಶ್ವರ ಬಾಬು ನಾಯ್ಕ್ (35) ಎಂದು ಗುರುತಿಸಲಾಗಿದೆ. ಪ್ರಕರಣದ ಆರೋಪಿಯಾಗಿರುವ ಪರಮೇಶ್ವರ ತಿಮ್ಮಾ ನಾಯ್ಕ್ (27) ಘಟನೆ ಬಳಿಕ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮಾಹಿತಿಯ ಪ್ರಕಾರ, ಇಬ್ಬರೂ ಸಂಬಂಧದಲ್ಲಿ ಚಿಕ್ಕಮ್ಮ–ದೊಡ್ಡಮ್ಮನ ಮಕ್ಕಳಾಗಿದ್ದು, ಅಣ್ಣ–ತಮ್ಮಂದಿರಂತೆ ಬೆಳೆದಿದ್ದರು. ಕಳೆದ ಒಂದೆರಡು ವರ್ಷಗಳಿಂದ ಪರಮೇಶ್ವರ ತಿಮ್ಮಾ ನಾಯ್ಕ್, ಮೃತ ಪರಮೇಶ್ವರ ಬಾಬು ನಾಯ್ಕ್ ಅವರ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ.ಈ ವಿಚಾರವಾಗಿ ಮೃತರು ವಿರೋಧ ವ್ಯಕ್ತಪಡಿಸುತ್ತಿದ್ದು, ಇದೇ ಕಾರಣಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆ ನಿನ್ನೆ ರಾತ್ರಿ “ಹೊರಗೆ ಮಾತನಾಡಬೇಕು” ಎಂದು ಹೇಳಿ ಪರಮೇಶ್ವರ ತಿಮ್ಮಾ ನಾಯ್ಕ್, ಪರಮೇಶ್ವರ ಬಾಬು ನಾಯ್ಕ್ ಅವರನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಅಲ್ಲಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕಾಗಿ ಶೋಧ ಮುಂದುವರಿಸಿದ್ದಾರೆ.

