
ಭಟ್ಕಳ: ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿಯಾಗಿ ದ್ವಿಚಕ್ರ ವಾಹನದಲ್ಲಿ ವೀಲಿಂಗ್ ಮಾಡಿ ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಯುವಕರನ್ನು ಇಂತಹ ಕೃತ್ಯಗಳಿಗೆ ಪ್ರೇರೇಪಿಸಿದ ಆರೋಪದಡಿ ಇನ್‌ಸ್ಟಾಗ್ರಾಂ ಖಾತೆದಾರನ ವಿರುದ್ಧ ಪ್ರಕರಣ ದಾಖಲಾಗಿದೆ.

ಭಟ್ಕಳ ಶಹರ ಪೊಲೀಸ್ ಠಾಣೆ ಯಲ್ಲಿ ದಾಖಲಾಗಿರುವ ಪ್ರಕರಣವು ಪೊಲೀಸ್ ಕಾನ್ಸ್ಟೇಬಲ್ ಸಚಿನ್ ಯಶವಂತರಾವ ಪವಾರ ನೀಡಿದ ದೂರಿನ ಆಧಾರದ ಮೇಲೆ ದಾಖಲಿಸಲಾಗಿದೆ.ದೂರಿನ ಪ್ರಕಾರ, “akkihotpiston” ಹೆಸರಿನ ಇನ್‌ಸ್ಟಾಗ್ರಾಂ ಖಾತೆ ಮೂಲಕ 2024ರಿಂದ ವಿವಿಧ ಸಂದರ್ಭಗಳಲ್ಲಿ ಭಟ್ಕಳದ ಸಾರ್ವಜನಿಕ ರಸ್ತೆಗಳಲ್ಲಿ ಬೈಕ್ ವೀಲಿಂಗ್ ಮಾಡಿರುವ ವಿಡಿಯೋಗಳನ್ನು ಚಿತ್ರೀಕರಿಸಿ ಅಪ್‌ಲೋಡ್ ಮಾಡಲಾಗಿದೆ ಎನ್ನಲಾಗಿದೆ.

ಈ ವಿಡಿಯೋಗಳು ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆಯಿದ್ದು, ಯುವಕರನ್ನು ಸಹ ಇಂತಹ ಅಪಾಯಕಾರಿ ಸಾಹಸಗಳಿಗೆ ಪ್ರೇರೇಪಿಸುವ ಉದ್ದೇಶ ಹೊಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಪ್ರಕರಣದ ತನಿಖೆಯನ್ನು ರವಿ ಗಂಜೇಕರ್ ನಡೆಸುತ್ತಿದ್ದಾರೆ.ಸಾರ್ವಜನಿಕ ರಸ್ತೆಗಳಲ್ಲಿ ವೀಲಿಂಗ್ ಹಾಗೂ ಅಪಾಯಕಾರಿ ವಾಹನ ಚಾಲನೆ ಕಾನೂನುಬಾಹಿರವಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

