
ಭಟ್ಕಳ: ಅತಿವೇಗದಲ್ಲಿ ಸಾಗುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದು, ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳದ ಬಂದರ ರಸ್ತೆ ಭಾಗದಲ್ಲಿ ಸಂಭವಿಸಿದೆ.
ಮೃತರನ್ನು ಸಬ್ಬತ್ತಿ ನಿವಾಸಿ ಮಧುರ ಮಂಜುನಾಥ ನಾಯ್ಕ (24) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡಿರುವ ಬೈಕ್ ಸವಾರ ಸುಮೇದ ನಾರಾಯಣ ನಾಯ್ಕ (ಗರಡಿಹಿತ್ಲು–ಬೆಳಕೆ ನಿವಾಸಿ) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಜೂನ್ 26ರಂದು ರಾತ್ರಿ ಸುಮಾರು 11:45ರ ವೇಳೆಗೆ ಸುಮೇದ ನಾಯ್ಕ ಅವರು ಟಿವಿಎಸ್ ಅಪಾಚೆ ಬೈಕ್‌ನಲ್ಲಿ ಮಧುರ ನಾಯ್ಕರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಸಂಶುದ್ದೀನ್ ಸರ್ಕಲ್ ಭಾಗದಿಂದ ಬಂದರ ರಸ್ತೆಯತ್ತ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ಬಂದರ ರಸ್ತೆ ಎರಡನೇ ಕ್ರಾಸ್ ಸಮೀಪ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಇಬ್ಬರೂ ಬೈಕ್‌ನಿಂದ ಕೆಳಗೆ ಬಿದ್ದಿದ್ದು, ಮಧುರ ನಾಯ್ಕ ಅವರಿಗೆ ಎದೆ, ಸೊಂಟ ಹಾಗೂ ಕೈ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸವಾರ ಸುಮೇದ ನಾಯ್ಕ ಅವರಿಗೂ ಗಂಭೀರ ಗಾಯಗಳಾಗಿದ್ದು ವೈದ್ಯಕೀಯ ಚಿಕಿತ್ಸೆ ಮುಂದುವರಿದಿದೆ.

ಸ್ಥಳೀಯ ಮಾಹಿತಿ ಪ್ರಕಾರ, ಮಧುರ ನಾಯ್ಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಘಟನೆ ತಿಳಿದ ಬಳಿಕ ಕುಟುಂಬ ಸದಸ್ಯರು, ಬಂಧುಗಳು ಹಾಗೂ ಸ್ಥಳೀಯರು ಆಸ್ಪತ್ರೆ ಬಳಿ ಸೇರಿದ್ದರು.ಈ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
