
ಉಡುಪಿ: ಸಾರ್ವಜನಿಕ ಸ್ಥಳಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಹೆಚ್ಚುತ್ತಿರುವ ಕುಡುಕರ ಹಾವಳಿ ನಿಯಂತ್ರಿಸಿ, ನಿರ್ಗತಿಕರಿಗೆ ಪರ್ಯಾಯ ಆಶ್ರಯ ವ್ಯವಸ್ಥೆ ಕಲ್ಪಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲಾ ಘಟಕ ಉಡುಪಿ ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿತು.

ಮನವಿಯಲ್ಲಿ ಉಡುಪಿ ನಗರವು ವೇಗವಾಗಿ ಬೆಳೆಯುತ್ತಿದ್ದು, ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಹಾಗೂ ಸ್ವಚ್ಛತೆ ಕಾಪಾಡುವುದು ಅಗತ್ಯವಾಗಿದೆ ಎಂದು ತಿಳಿಸಲಾಗಿದೆ. ಆದರೆ ಇತ್ತೀಚೆಗೆ ಕೆಲ ಸಾರ್ವಜನಿಕ ಸ್ಥಳಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಕುಡುಕರು ಹಾಗೂ ನಿರ್ಗತಿಕರ ಸಂಖ್ಯೆ ಹೆಚ್ಚಾಗಿದ್ದು, ಕೆಲವರು ಅಲ್ಲಿಯೇ ಮಲಗಿ, ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಬಗ್ಗೆ ಗಮನ ಸೆಳೆಯಲಾಗಿದೆ.

ಈ ಪರಿಸ್ಥಿತಿಯಿಂದ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಮತ್ತು ಪ್ರವಾಸಿಗರು ಅಸೌಕರ್ಯ ಅನುಭವಿಸುತ್ತಿದ್ದು, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳ ಬಳಕೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ನಿರ್ಗತಿಕರಿಗೆ ಮಾನವೀಯ ದೃಷ್ಟಿಯಿಂದ ತಕ್ಷಣ ಪರ್ಯಾಯ ಆಶ್ರಯ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಶಾಂತಿ ಉಂಟುಮಾಡುವವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ಸೇನೆ ಉಡುಪಿ ಜಿಲ್ಲಾ ಅಧ್ಯಕ್ಷ ಸುಜಯ್ ಪೂಜಾರಿ, ಗೌರವಾಧ್ಯಕ್ಷ ಲಕ್ಷ್ಮೀಶ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸಿದ್ದಣ್ಣ ಎಸ್. ಪೂಜಾರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಬಿ.ವಿ., ಜಿಲ್ಲಾ ಕಾರ್ಯದರ್ಶಿ ಸುಬ್ಬಣ್ಣ ಕಾಮತ್ ಹಾಗೂ ಜಿಲ್ಲಾ ಸದಸ್ಯರಾದ ಅಶೋಕ್, ಸಂತೋಷ್ ಹನುಮಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.
