
ಭಟ್ಕಳ: ತಾಲೂಕಿನ ಶಿರಾಲಿಯಲ್ಲಿರುವ ಶ್ರೀ ಮಹಾಗಣಪತಿ ಮಹಾಮಾಯೆ (ಎಂ.ಜಿ.ಎಂ) ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಮಾಹಿತಿಯ ಪ್ರಕಾರ, ದೇವಸ್ಥಾನದ ಹಿಂಭಾಗದಲ್ಲಿರುವ ಕಬ್ಬಿಣದ ಬಾಗಿಲನ್ನು ಗ್ಯಾಸ್ ಕಟರ್ ಉಪಯೋಗಿಸಿ ತೆರೆಯಲು ಕೆಲವರು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ದೇವಸ್ಥಾನದಲ್ಲಿದ್ದ ಸಿಬ್ಬಂದಿ ಹಾಗೂ ಸ್ಥಳೀಯರು ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿ ಎಚ್ಚರಿಕೆ ನೀಡಿದ ಹಿನ್ನೆಲೆ, ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.
ದೇವಸ್ಥಾನದಲ್ಲಿದ್ದ ಬಂಗಾರ, ಬೆಳ್ಳಿ ಆಭರಣಗಳು ಸೇರಿದಂತೆ ಇತರ ಅಮೂಲ್ಯ ವಸ್ತುಗಳನ್ನು ಗುರಿಯಾಗಿಸಿಕೊಂಡು ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು ಎಂಬ ಆರೋಪ ದೂರಿನಲ್ಲಿ ದಾಖಲಾಗಿದೆ.

ಈ ಕುರಿತು ದೇವಸ್ಥಾನದ ವ್ಯವಸ್ಥಾಪಕ ಅಜಯ್ ಜಯಕರ ಪ್ರಭು ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

