ಕುಂದಾಪುರ: ಪತ್ರಕರ್ತರು ಯಾವುದೇ ರೀತಿಯ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ಸಮಾಜದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೃತ್ತಿ ಧರ್ಮ ಪಾಲಿಸಬೇಕು ಎಂದು ಅಂಬೇಡ್ಕರ್ ಸೇನೆ (ರಿ) ರಾಜ್ಯಾಧ್ಯಕ್ಷ ಪಿ. ಮೂರ್ತಿ ಅಭಿಪ್ರಾಯಪಟ್ಟರು.

ಕುಂದಾಪುರದ ತ್ರಾಸಿಯ ಪ್ರೆಸ್ಟ್ರಿಜ್ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕಾನಿಪ ಧ್ವನಿ) ಉಡುಪಿ ಜಿಲ್ಲಾ ಘಟಕ ಹಾಗೂ ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸತ್ಯ ಮತ್ತು ಜವಾಬ್ದಾರಿತನದಿಂದ ಕೂಡಿದ ಪತ್ರಿಕೋದ್ಯಮವೇ ಸಮಾಜಕ್ಕೆ ದಿಕ್ಕು ತೋರಬಲ್ಲದು ಎಂದರು. ವಾಸ್ತವಿಕತೆಯಿಂದ ದೂರ ಸರಿಯುವ ವರದಿಗಳು ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ಸಮಾಜದಲ್ಲಿ ನಡೆಯುವ ಅನ್ಯಾಯ, ಅಸಮಾನತೆ ಮತ್ತು ಅಕ್ರಮಗಳನ್ನು ಜನರ ಮುಂದೆ ತರುವ ಪ್ರಮುಖ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಎಂದು ಹೇಳಿದರು. ಪ್ರಜಾಪ್ರಭುತ್ವದ ನಾಲ್ಕನೇ ಅಸ್ತಂಭವಾಗಿರುವ ಮಾಧ್ಯಮಗಳು ಜನರಿಗೆ ನಿಖರ ಹಾಗೂ ವಿಶ್ವಾಸಾರ್ಹ ಮಾಹಿತಿಯನ್ನು ತಲುಪಿಸುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕೆಂದು ಅವರು ಕರೆ ನೀಡಿದರು.
ಸುದ್ದಿ ಸಂಗ್ರಹಣೆ ಮತ್ತು ಪ್ರಸಾರದ ವೇಳೆ ಅನೇಕ ಪತ್ರಕರ್ತರು ಜೀವದ ಹಂಗನ್ನೂ ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಾರೆ. ಅವರ ಕುಟುಂಬದ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಪತ್ರಕರ್ತರ ಕಲ್ಯಾಣಕ್ಕಾಗಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಚೌಕಟ್ಟಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕಾನಿಪ ಧ್ವನಿ ಸಂಘಟನೆ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ 300ಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರಿಗೆ ಉಚಿತ ನೋಂದಣಿ ನಡೆಸಿ ಕಾರ್ಮಿಕ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದೇಶ ಸೇವೆ ಸಲ್ಲಿಸಿದ ಮಾಜಿ ಸೈನಿಕರು, ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾನಿಪ ಧ್ವನಿ ಮತ್ತು ಅಂಬೇಡ್ಕರ್ ಸೇನೆ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಗುರುತಿನ ಚೀಟಿಗಳನ್ನೂ ವಿತರಿಸಲಾಯಿತು.

ವೇದಿಕೆಯಲ್ಲಿ ಕಾನಿಪ ಧ್ವನಿ ಕರಾವಳಿ ವಿಭಾಗದ ಅಧ್ಯಕ್ಷ ಕುಮಾರ್ ನಾಯ್ಕ್, ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ, ಕ್ಲಾಸಿಕ್ ಬಿಲ್ಡರ್ಸ್ ಉಡುಪಿ ಸಂಸ್ಥೆಯ ಪ್ರಭಾಕರ್ ಪೂಜಾರಿ, ಅಂಬೇಡ್ಕರ್ ಸೇನೆ ರಾಮನಗರ ಜಿಲ್ಲಾಧ್ಯಕ್ಷ ಸಾಗರ್, ಉದ್ಯಮಿ ಶಿವ ಪೂಜಾರಿ, ಪತ್ರಕರ್ತೆ ಶ್ವೇತಾ ಆಚಾರ್ಯ, ಪೊಲೀಸ್ ವಾರ್ತೆ ಪತ್ರಿಕೆಯ ಸಂಪಾದಕ ಸುಭಾಷ್ ಶೆಟ್ಟಿ, ಪ್ರೆಸ್ಟ್ರಿಜ್ ಹಾಲ್‌ನ ಪ್ರವೀಣ್ ಶೆಟ್ಟಿ, ಕುಂದಾಪುರ ಕಾರ್ಮಿಕ ನಿರೀಕ್ಷಕರು ಹಾಗೂ ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಪವನ ನಾಯ್ಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕಾನಿಪ ಧ್ವನಿ ಉಡುಪಿ ಜಿಲ್ಲಾಧ್ಯಕ್ಷ ದಾಮೋದರ ಮೊಗವೀರ ಅತಿಥಿಗಳನ್ನು ಸ್ವಾಗತಿಸಿದರು. ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೊಡು ಪ್ರಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕಾನಿಪ ಧ್ವನಿ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಹಾಗೂ 500ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು.

