ಭಟ್ಕಳ: ಪತ್ರಿಕಾ ದಿನಾಚರಣೆಯ ಅಂಗವಾಗಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಭಟ್ಕಳ ತಾಲೂಕು ಘಟಕವು ಭಾನುವಾರ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ, ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳ ನಡುವಿನ ಪರಸ್ಪರ ಸಹಕಾರ, ವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಒತ್ತಿಹೇಳಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ಉಪವಿಭಾಗದ ಡಿವೈಎಸ್ಪಿ ಬಿ. ಗಿರೀಶ್ ವಹಿಸಿದ್ದರು. ಭಟ್ಕಳ ವೃತ್ತದ ಸಿಪಿಐ ದಿವಾಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ ಭಟ್ಕಳ ನಗರ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ನಾಯ್ಕ್ ಅವರನ್ನು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹಾಗೂ ಡಿಜಿ–ಐಜಿಪಿ ಪ್ರಶಸ್ತಿ ಪದಕಕ್ಕೆ ಭಾಜನರಾದ ಹೆಡ್ ಕಾನ್ಸ್ಟೇಬಲ್ ದೀಪಕ್ ನಾಯ್ಕ್ ಅವರನ್ನು ಸಂಘದ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.

ಇದೇ ವೇಳೆ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಾಮಕೃಷ್ಣ ಭಟ್ ಸೇರಿದಂತೆ ಸಂಘದ ಸದಸ್ಯರಾದ ಮಂಜುನಾಥ್ ಮೊಗೇರ್, ದಯಾನಂದ ನಾಯ್ಕ್, ಗಣೇಶ್ ನಾಯ್ಕ್ ಮತ್ತು ಯಶಶ್ರೀ ಆರ್. ಭಟ್ ಅವರನ್ನೂ ಸನ್ಮಾನಿಸಲಾಯಿತು.

ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಡಿವೈಎಸ್ಪಿ ಬಿ. ಗಿರೀಶ್, ಸಮಾಜದ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಮತ್ತು ಪತ್ರಕರ್ತರ ನಡುವಿನ ಉತ್ತಮ ಬಾಂಧವ್ಯ ಅತ್ಯಂತ ಅಗತ್ಯ ಎಂದು ಹೇಳಿದರು. ಆಡಳಿತದಲ್ಲಿನ ಲೋಪದೋಷಗಳನ್ನು ಜನರ ಗಮನಕ್ಕೆ ತರುವಲ್ಲಿ ಪತ್ರಕರ್ತರು ಮಹತ್ವದ ಪಾತ್ರ ವಹಿಸುತ್ತಾರೆ. ಪೊಲೀಸ್ ಸಿಬ್ಬಂದಿಯ ಸೇವೆಯನ್ನು ಗೌರವಿಸುವ ಇಂತಹ ಕಾರ್ಯಕ್ರಮಗಳು ಪರಸ್ಪರ ವಿಶ್ವಾಸವನ್ನು ಇನ್ನಷ್ಟು ಬಲಪಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಸಿಪಿಐ ದಿವಾಕರ್ ಮಾತನಾಡಿ, ಸಮಾಜದ ಒಳಿತಿಗಾಗಿ ಪೊಲೀಸ್ ಇಲಾಖೆ ಹಾಗೂ ಮಾಧ್ಯಮಗಳು ಜವಾಬ್ದಾರಿಯುತವಾಗಿ ಕೈಜೋಡಿಸಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ತಿಳಿಸಿದರು. ಪತ್ರಿಕಾ ಕ್ಷೇತ್ರದ ಸೇವೆಯನ್ನು ಅವರು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿದ ಪಿಎಸ್ಐ ನವೀನ್ ನಾಯ್ಕ್ ಮತ್ತು ಹೆಡ್ ಕಾನ್ಸ್ಟೇಬಲ್ ದೀಪಕ್ ನಾಯ್ಕ್, ತಮ್ಮ ಸೇವೆಯನ್ನು ಗುರುತಿಸಿ ಗೌರವಿಸಿದ ಸಂಘಟನೆಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ಅರ್ಜುನ್ ಮಲ್ಯ ಅತಿಥಿಗಳನ್ನು ಸ್ವಾಗತಿಸಿದರು. ಕರಾವಳಿ ಕರ್ನಾಟಕ ವಲಯದ ಅಧ್ಯಕ್ಷ ಕುಮಾರ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಿಕಾ ದಿನಾಚರಣೆಯ ಮಹತ್ವ ಹಾಗೂ ಸಂಘದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ನಸಿ ಮುಲ್ಲಾ ಘನಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಂಘದ ಕಾರ್ಯದರ್ಶಿ ಉಲ್ಲಾಸ್ , ಸದಸ್ಯರಾದ ಮೊಹಮ್ಮದ್ ಅಶ್ರಫ್ ಎಂ., ಗುರುಪ್ರಸಾದ್, ಸಂಘದ ಪದಾಧಿಕಾರಿಗಳು, ಪತ್ರಕರ್ತರು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪತ್ರಕರ್ತರು ಮತ್ತು ಪೊಲೀಸ್ ಇಲಾಖೆಯ ನಡುವಿನ ಸಹಕಾರ, ಪರಸ್ಪರ ಗೌರವ ಹಾಗೂ ಸಾಮಾಜಿಕ ಬದ್ಧತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಗಮನ ಸೆಳೆಯಿತು.

