ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಂಸದ ಹಾಗೂ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನದ ಅಂಗವಾಗಿ ಹಾರ್ಸಿಕಟ್ಟಾದಲ್ಲಿ ಜುಲೈ 12, ಭಾನುವಾರ ಬೃಹತ್ ಉಚಿತ “ಮೆಗಾ ಆರೋಗ್ಯ ತಪಾಸಣಾ ಶಿಬಿರ” ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.

ಮಂಗಳವಾರ ಸಿದ್ದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಶಿಬಿರ ಆರಂಭವಾಗಲಿದೆ ಎಂದು ತಿಳಿಸಿದರು. ಕಾಗೇರಿ ಅಭಿಮಾನಿ ಬಳಗದ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್, ಶಿರಸಿ–ಸಿದ್ದಾಪುರ ಕಾಗೇರಿ ಅಭಿಮಾನಿ ಬಳಗ ಹಾಗೂ ಸಿದ್ದಾಪುರ ಬಿಜೆಪಿ ಮಂಡಳ ಸಹಯೋಗ ನೀಡಿವೆ ಎಂದು ಹೇಳಿದರು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಉಚಿತ ಆರೋಗ್ಯ ಸೇವೆಯ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಅನಂತಮೂರ್ತಿ ಹೆಗಡೆ ಮಾತನಾಡಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ವಿಶೇಷವಾಗಿ ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು ಸುಮಾರು ₹142 ಕೋಟಿ ವೆಚ್ಚದಲ್ಲಿ 250 ಹಾಸಿಗೆಗಳ ಆಧುನಿಕ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಲು ಅವರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಸ್ಮರಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಹಿನ್ನೆಲೆಯಲ್ಲಿ ಜನರಿಗೆ ಮುನ್ನೆಚ್ಚರಿಕಾ ಆರೋಗ್ಯ ತಪಾಸಣೆ ಸಿಗುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಾಯಿಲೆ ಗಂಭೀರ ಹಂತ ತಲುಪುವ ಮೊದಲು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಆರೋಗ್ಯದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶಿಬಿರದಲ್ಲಿ ಶಿರಸಿಯ ಟಿ.ಎಸ್.ಎಸ್. ಆಸ್ಪತ್ರೆ, ಮಾರಿಕಾಂಬಾ ಆಸ್ಪತ್ರೆ ಹಾಗೂ ಜೋಶಿ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಜನರಲ್ ಮೆಡಿಸಿನ್, ಯೂರಾಲಜಿ, ಸ್ತ್ರೀರೋಗ, ಮಕ್ಕಳ ಆರೋಗ್ಯ, ಚರ್ಮರೋಗ, ನೇತ್ರ ಚಿಕಿತ್ಸಾ ಹಾಗೂ ಕ್ಯಾನ್ಸರ್ ವಿಭಾಗದ ವೈದ್ಯರು ರೋಗಿಗಳಿಗೆ ತಪಾಸಣೆ ನಡೆಸಿ ಅಗತ್ಯ ಸಲಹೆ ನೀಡಲಿದ್ದಾರೆ.ಇದರ ಜೊತೆಗೆ ಎಂ.ಎಂ. ಜೋಶಿ ಗಣೇಶ ನೇತ್ರಾಲಯದ ವತಿಯಿಂದ ಉಚಿತ ಕಣ್ಣಿನ ತಪಾಸಣೆ ನಡೆಯಲಿದ್ದು, ಬೆಂಗಳೂರಿನ ಭಾರತೀಯ ಕ್ಯಾನ್ಸರ್ ಸೊಸೈಟಿ ಹಾಗೂ ಅಸ್ಮಿತೆ ಫೌಂಡೇಶನ್ ಸಹಯೋಗದಲ್ಲಿ ಮಹಿಳೆಯರಿಗಾಗಿ ಸ್ತನ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ಯಾನ್ಸರ್ ತಪಾಸಣೆಯೂ ಉಚಿತವಾಗಿ ಲಭ್ಯವಾಗಲಿದೆ.
ಶಿಬಿರದಲ್ಲಿ ರಕ್ತದೊತ್ತಡ (ಬಿಪಿ) ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ (ಶುಗರ್) ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ. ಅಗತ್ಯವಿರುವವರಿಗೆ ಆಯ್ದ ಔಷಧಿಗಳನ್ನು ಸಹ ಉಚಿತವಾಗಿ ವಿತರಿಸಲಾಗುವುದು.
ನೋಂದಣಿ ಪ್ರಕ್ರಿಯೆ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದ್ದು, ವೈದ್ಯರ ತಪಾಸಣೆ 9.30ರಿಂದ ಆರಂಭವಾಗಿ ಮಧ್ಯಾಹ್ನ 1.30ರವರೆಗೆ ನಡೆಯಲಿದೆ ಎಂದು ಅನಂತಮೂರ್ತಿ ಹೆಗಡೆ ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಹೆಗಡೆ, ಶಿವಕುಮಾರ ಕೊಂಡ್ಲಿ ಹಾಗೂ ವಿನಾಯಕ ನಾಯ್ಕ ಉಪಸ್ಥಿತರಿದ್ದರು.
