
ಶಿರಸಿ: ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಬಿರುಗಾಳಿಯ ಪರಿಣಾಮ ಶಿರಸಿ ನಗರದ ಗಾಂಧಿನಗರ ಪ್ರದೇಶದಲ್ಲಿ ಮನೆಗೆ ಹೊಂದಿಕೊಂಡಿದ್ದ ಕಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ನಿವಾಸಿ ರಾಮಚಂದ್ರ ನಾಯ್ಕ ಅವರ ಮನೆಗೆ ಹಾನಿಯಾಗಿದೆ.

ಘಟನೆಯ ಮಾಹಿತಿ ತಿಳಿದ ಬಳಿಕ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹಾಗೂ ಶಿರಸಿ ನಗರ ಬಿಜೆಪಿ ಅಧ್ಯಕ್ಷ ಆನಂದ್ ಸಾಲೇರ್ ಸೇರಿದಂತೆ ಪಕ್ಷದ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು. ಸಂತ್ರಸ್ತ ಕುಟುಂಬದೊಂದಿಗೆ ಮಾತುಕತೆ ನಡೆಸಿದ ಅವರು ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಮುಖಂಡರು, ರಾಮಚಂದ್ರ ನಾಯ್ಕ ಅವರು ಆಹಾರ ವಿತರಣೆ ಸೇವೆಯಲ್ಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದು, ಈಗಾಗಲೇ ಗೋಡೆ ಕುಸಿತದಿಂದ ಮನೆಗೆ ಹಾನಿಯಾಗಿದೆ. ಮತ್ತೆ ಮಳೆ ಮುಂದುವರಿದರೆ ಮತ್ತಷ್ಟು ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತ ರಾಮಚಂದ್ರ ನಾಯ್ಕ ಮಾತನಾಡಿ, ರಾತ್ರಿ ವೇಳೆ ಪಕ್ಕದ ಮನೆಯ ಕಂಪೌಂಡ್ ಗೋಡೆ ಕುಸಿದು ತಮ್ಮ ಮನೆಯ ಹಂಚು, ಗೋಡೆ ಹಾಗೂ ನೀರಿನ ಸಂಗ್ರಹ ಟ್ಯಾಂಕ್‌ಗೆ ಹಾನಿಯಾಗಿದೆ ಎಂದು ತಿಳಿಸಿದರು. ದಿನನಿತ್ಯದ ಉದ್ಯೋಗವನ್ನೇ ಅವಲಂಬಿಸಿರುವ ತಮ್ಮ ಕುಟುಂಬ ಇದೀಗ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಆನಂದ್ ಸಾಲೇರ್ ಅವರು ನಗರಸಭೆ ಇಂಜಿನಿಯರ್ ಸುಫಿಯಾನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸ್ಥಳದಲ್ಲಿ ಮಣ್ಣು ಕುಸಿಯುತ್ತಿರುವ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿ ತಕ್ಷಣ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಅಧಿಕಾರಿಗಳು ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದರು.
ನಂತರ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಸಂತ್ರಸ್ತ ರಾಮಚಂದ್ರ ನಾಯ್ಕ ಅವರಿಗೆ ವೈಯಕ್ತಿಕ ಆರ್ಥಿಕ ನೆರವು ನೀಡಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಹಾಗೂ ನಗರಸಭೆಯ ಮಾಜಿ ಉಪಾಧ್ಯಕ್ಷ ರಮಾಕಾಂತ್ ಭಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
