ಭಟ್ಕಳ: ಇತ್ತೀಚೆಗೆ ಭಟ್ಕಳದ ವೆಂಕಟಾಪುರ ನದಿ ವ್ಯಾಪ್ತಿಯಲ್ಲಿ ನಡೆದ ಚಿಪ್ಪಿಕಲ್ಲು ದುರಂತದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಇದೀಗ ಮೃತಪಟ್ಟಿರುವ ಘಟನೆ ಕುಟುಂಬ ಮತ್ತು ಸ್ಥಳೀಯರಲ್ಲಿ ಮತ್ತಷ್ಟು ದುಃಖಕ್ಕೆ ಕಾರಣವಾಗಿದೆ.

ಮೃತರನ್ನು ಬೆಂಗ್ರೆ ಸಮೀಪದ ಮೋಳಿನಮನೆಯ ನಿವಾಸಿ ಆನಂದ ಅಣ್ಣಪ್ಪ ನಾಯ್ಕ (36) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ತಟ್ಟಿಹಕ್ಕಲ ಹೊಳೆಯ ಬಳಿ ಚಿಪ್ಪಿಕಲ್ಲು ಆರಿಸುವ ವೇಳೆ ಸಂಭವಿಸಿದ್ದ ದುರಂತದಲ್ಲಿ 14 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದರು. ಆ ಘಟನೆಯಲ್ಲಿ ಆನಂದ ಅವರ ತಾಯಿ ಲಕ್ಷಿ ನಾಯ್ಕ ಕೂಡ ಪ್ರಾಣ ಕಳೆದುಕೊಂಡಿದ್ದರು.
ಕುಟುಂಬದವರ ಮಾಹಿತಿ ಪ್ರಕಾರ, ತಾಯಿಯ ನಿಧನದ ಬಳಿಕ ಆನಂದ ಅವರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಅವರ ವರ್ತನೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿತ್ತು. ಮದ್ಯಪಾನದ ವ್ಯಸನವೂ ಹೆಚ್ಚಾಗಿದ್ದು, ಇದರಿಂದ ಕುಟುಂಬ ಸದಸ್ಯರು ಆತಂಕದಲ್ಲಿದ್ದರು ಎನ್ನಲಾಗಿದೆ.
ಘಟನೆಯ ದಿನ ಮಧ್ಯಾಹ್ನ ಅವರು ಮನೆಯೊಳಗೆ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದರು. ಬಳಿಕ ಮನೆಯ ಮೇಲ್ಚಾವಣಿಯ ಮೂಲಕ ಹೊರಗೆ ತೆರಳಿ ಬಾವಿಯೊಳಗೆ ಬಿದ್ದಿರುವುದು ತಿಳಿದುಬಂದಿದೆ. ನಂತರ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆ ತರಲಾಯಿತು.
ಆನಂದ ನಾಯ್ಕ ಅವರು ಎಂ.ಕಾಂ ಪದವಿ ಪಡೆದಿದ್ದರೂ ಉದ್ಯೋಗ ಸಿಗದಿರುವುದು ಕೂಡ ಅವರಿಗೆ ಮಾನಸಿಕ ಒತ್ತಡಕ್ಕೆ ಕಾರಣವಾಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.
ಈ ಕುರಿತು ಮೃತರ ತಂದೆ ಅಣ್ಣಪ್ಪ ನಾಯ್ಕ ಅವರು ಮುರುಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
