ದಾಂಡೇಲಿ: ಸ್ನೇಹಿತನ ಅಪಘಾತಕ್ಕೀಡಾದ ಬೈಕ್ ಬಿಡುಗಡೆ ಮಾಡಿಸಿಕೊಳ್ಳುವ ಉದ್ದೇಶದಿಂದ ಪೊಲೀಸ್ ಠಾಣೆಗೆ ತೆರಳಿದ್ದ 18 ವರ್ಷದ ಯುವತಿಯೊಬ್ಬರು, ಠಾಣೆಯ ಇಬ್ಬರು ಸಿಬ್ಬಂದಿ ತಮ್ಮ ಮೊಬೈಲ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡು ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿತ ಸಿಬ್ಬಂದಿಯ ವಿರುದ್ಧ ವಿಚಾರಣೆ ನಡೆಯುತ್ತಿದೆ.

ಮಾಹಿತಿಯ ಪ್ರಕಾರ, ಜುಲೈ 4ರಂದು ಅಪಘಾತಕ್ಕೀಡಾದ ಬೈಕ್ ಅನ್ನು ಬಿಡುಗಡೆ ಮಾಡಿಸಿಕೊಳ್ಳಲು ಯುವತಿ ದಾಂಡೇಲಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಆಡಳಿತಾತ್ಮಕ ಪ್ರಕ್ರಿಯೆಯ ಭಾಗವಾಗಿ ಅವರ ಮೊಬೈಲ್ ಸಂಖ್ಯೆಯನ್ನು ಪಡೆದಿದ್ದರೆಂದು ಹೇಳಲಾಗಿದೆ. ಬಳಿಕ ಅಪರಿಚಿತ ಸಂಖ್ಯೆಯಿಂದ ಕರೆಗಳು ಮತ್ತು ವಾಟ್ಸಪ್ ಸಂದೇಶಗಳು ಬರಲು ಆರಂಭವಾಗಿವೆ.
ನಂತರ ಆ ಸಂಖ್ಯೆಗಳು ಠಾಣೆಯ ಸಿಬ್ಬಂದಿಯಾಗಿರುವ ಮಹಂತೇಶ್ ಮತ್ತು ಇಮ್ರಾನ್ ಅವರದ್ದಾಗಿವೆ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪದ ಪ್ರಕಾರ, ಅವರು ಯುವತಿಗೆ ಅಸಭ್ಯ ಭಾಷೆಯಲ್ಲಿ ಮಾತನಾಡಿದ್ದು, ವಾಟ್ಸಪ್ ಮೂಲಕ ಅನುಚಿತ ಸಂದೇಶಗಳನ್ನು ಕಳುಹಿಸಿ ಲಾಡ್ಜ್‌ಗೆ ಬರಲು ಒತ್ತಾಯಿಸಿರುವುದಾಗಿ ಹೇಳಲಾಗಿದೆ.
ಈ ಘಟನೆ ಕುರಿತು ಯುವತಿ ಮೊದಲಿಗೆ ದಾಂಡೇಲಿ ಪೊಲೀಸ್ ಠಾಣೆಯಲ್ಲೇ ದೂರು ಸಲ್ಲಿಸಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ. ಬಳಿಕ ಅವರು ಕಾರವಾರದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ.
ಅದರ ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಲಾಗಿದ್ದು, ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ. ಆರೋಪಿತ ಇಬ್ಬರು ಪೊಲೀಸ್ ಸಿಬ್ಬಂದಿಯಿಂದ ವಿಚಾರಣೆ ನಡೆಯುತ್ತಿದ್ದು, ಅವರು ಕೊಂಕಣಿ ಭಾಷೆಯಲ್ಲಿ ಕೆಲವು ಸಂದೇಶಗಳನ್ನು ಕಳುಹಿಸಿರುವ ಬಗ್ಗೆ ಕೂಡ ತನಿಖೆಯಲ್ಲಿ ಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಕುರಿತು ಪೊಲೀಸ್ ಇಲಾಖೆಯಿಂದ ಅಧಿಕೃತ ತನಿಖೆ ಮುಂದುವರಿದಿದ್ದು, ತನಿಖೆಯ ಅಂತಿಮ ವರದಿ ಬಳಿಕವೇ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ.

