
ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನದ ಅಂಗವಾಗಿ ಶಿರಸಿ ತಾಲೂಕಿನ ಕೋಳಿಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ ಘಟಕವನ್ನು ದೇಣಿಗೆಯಾಗಿ ನೀಡಲಾಯಿತು. ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷರು ಹಾಗೂ ಟ್ರಸ್ಟ್ ಅಧ್ಯಕ್ಷರಾದ ಅನಂತಮೂರ್ತಿ ಹೆಗಡೆ ಘಟಕವನ್ನು ಶಾಲೆಗೆ ಹಸ್ತಾಂತರಿಸಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ, ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸಂಸದ ಕಾಗೇರಿ ಅವರ ಜನ್ಮದಿನದ ಸಂದರ್ಭದಲ್ಲಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿರುವುದು ಸಂತಸದ ವಿಷಯ ಎಂದು ಹೇಳಿದರು. ಕಾಗೇರಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಜನಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಶಕ್ತಿ ದೊರೆಯಲಿ ಎಂದು ಹಾರೈಸಿದರು.

ಟ್ರಸ್ಟ್ ವತಿಯಿಂದ ಈಗಾಗಲೇ ಅನೇಕ ಶಾಲೆಗಳು ಹಾಗೂ ವಿವಿಧ ಸಾರ್ವಜನಿಕ ಸಂಸ್ಥೆಗಳಿಗೆ ವಾಟರ್ ಫಿಲ್ಟರ್‌ಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು. ಕೋಳಿಗಾರ ಶಾಲೆಯಲ್ಲಿ ಅಡುಗೆ ಕೋಣೆಯ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ನೆರವು ಅಗತ್ಯವಿರುವ ಮಾಹಿತಿ ಲಭಿಸಿದ್ದು, ತಮ್ಮಿಂದಾಗುವ ಮಟ್ಟಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಗತ್ಯವಿರುವವರಿಗೆ ನೆರವಾಗುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದ್ದು, ದಾನ ಮತ್ತು ಸೇವೆಯ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಸಮಾಜದಿಂದ ದೊರೆಯುವ ಗೌರವವು ಇನ್ನಷ್ಟು ಜವಾಬ್ದಾರಿಯೊಂದಿಗೆ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಎಂದೂ ಹೇಳಿದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ ಹೆಗಡೆ ಮಾತನಾಡಿ, ಹಣ ಮತ್ತು ಆಸ್ತಿ ಶಾಶ್ವತವಲ್ಲ; ಆದರೆ ಸಮಾಜಕ್ಕಾಗಿ ಮಾಡುವ ಸೇವೆ ಮತ್ತು ಉತ್ತಮ ಕಾರ್ಯಗಳು ಮಾತ್ರ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತವೆ ಎಂದು ಹೇಳಿದರು. ಅನಂತಮೂರ್ತಿ ಹೆಗಡೆ ಅವರು ಈಗಾಗಲೇ 150ಕ್ಕೂ ಹೆಚ್ಚು ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಒದಗಿಸಿದ್ದು, ಇದೀಗ ಕೋಳಿಗಾರ ಶಾಲೆಯೂ ಆ ಸೌಲಭ್ಯ ಪಡೆದಿರುವುದು ಸಂತಸದ ಸಂಗತಿ ಎಂದು ತಿಳಿಸಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಅನಂತಮೂರ್ತಿ ಹೆಗಡೆಯವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವಿನಾಯಕ ಭಟ್, ಎಸ್‌ಡಿಎಂಸಿ ಉಪಾಧ್ಯಕ್ಷೆ ರಮ್ಯಾ ಹೆಗಡೆ, ಮುಖ್ಯೋಪಾಧ್ಯಾಯೆ ಸುರೇಖಾ ಜಿ. ಕೊಡಸರ, ಮಹಾಬಲೇಶ್ವರ ಹೆಗಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕಿ ಸುಧಾ ಎಸ್. ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.
