
ಭಟ್ಕಳ: ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ (ಎಬಿ-ಆರ್ಕೆ) ಯೋಜನೆಯ 2026–27ನೇ ಸಾಲಿನ ರಾಜ್ಯಮಟ್ಟದ ಕಾರ್ಯಕ್ಷಮತೆ ಮೌಲ್ಯಮಾಪನದಲ್ಲಿ ಭಟ್ಕಳ ತಾಲೂಕು ಆಸ್ಪತ್ರೆ ಗಮನಾರ್ಹ ಸಾಧನೆ ದಾಖಲಿಸಿದೆ. ಆಸ್ಪತ್ರೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸಿದ್ದು, ರಾಜ್ಯ ಮಟ್ಟದಲ್ಲಿ 37ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಆಸ್ಪತ್ರೆಯು ಎಬಿ-ಆರ್ಕೆ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದರ ಜೊತೆಗೆ ಅರ್ಹ ಫಲಾನುಭವಿಗಳ ನೋಂದಣಿ, ಯೋಜನೆಯಡಿ ಲಭ್ಯವಿರುವ ಚಿಕಿತ್ಸಾ ಸೇವೆಗಳ ಸಮರ್ಪಕ ಬಳಕೆ ಹಾಗೂ ಸರ್ಕಾರಿ ಆರೋಗ್ಯ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ತೋರಿದ ಉತ್ತಮ ಕಾರ್ಯಕ್ಷಮತೆಯ ಆಧಾರದ ಮೇಲೆ ಈ ಸ್ಥಾನಮಾನ ದೊರೆತಿದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ.

ಈ ಸಾಧನೆ ಕುರಿತು ಪ್ರತಿಕ್ರಿಯಿಸಿದ ಆಡಳಿತ ವೈದ್ಯಾಧಿಕಾರಿ ಡಾ. ಅರುಣ ಕುಮಾರ, ಆಸ್ಪತ್ರೆಯ ವೈದ್ಯರು, ಶುಶ್ರೂಷಕರು, ವೈದ್ಯಕೀಯ ಮತ್ತು ವೈದ್ಯಕೇತರ ಸಿಬ್ಬಂದಿ, ಆಡಳಿತ ವಿಭಾಗದ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರವೇ ಯಶಸ್ಸಿನ ಮೂಲ ಕಾರಣವಾಗಿದೆ ಎಂದು ಹೇಳಿದರು. ಎಲ್ಲರೂ ತಂಡವಾಗಿ ಕಾರ್ಯನಿರ್ವಹಿಸಿದ ಪರಿಣಾಮ ಈ ಫಲಿತಾಂಶ ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮುಂದಿನ ದಿನಗಳಲ್ಲಿಯೂ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಆಸ್ಪತ್ರೆ ಬದ್ಧವಾಗಿದೆ ಎಂದು ಡಾ. ಅರುಣ ಕುಮಾರ ತಿಳಿಸಿದರು. ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಪ್ರಯೋಜನವನ್ನು ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲಾಗುವುದು ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಟ್ಕಳ ತಾಲೂಕು ಆಸ್ಪತ್ರೆಯ ಈ ಸಾಧನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ. ಜಿಲ್ಲೆಯ ಸರ್ಕಾರಿ ಆರೋಗ್ಯ ಸೇವೆಯ ಗುಣಮಟ್ಟವನ್ನು ಪ್ರತಿಬಿಂಬಿಸುವ ಮತ್ತೊಂದು ಮಹತ್ವದ ಮೈಲಿಗಲ್ಲಾಗಿ ಈ ಸಾಧನೆಯನ್ನು ಪರಿಗಣಿಸಲಾಗಿದೆ.

