ಭಟ್ಕಳ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯಕ್ರಮದ ಭಾಗವಾಗಿ, ಭಟ್ಕಳ ತಾಲೂಕು ಆಡಳಿತವು SVEEP ಯೋಜನೆಯಡಿ ಯುವ ಮತದಾರರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿತು.

ಅಭಿಯಾನದ ಅಂಗವಾಗಿ ಭಟ್ಕಳದ ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಯ ಪರಿಷ್ಕರಣೆಯ ಅಗತ್ಯತೆ ಮತ್ತು ಪ್ರಕ್ರಿಯೆಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಹೊಸ ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳುವುದು, ಹೆಸರು ಅಥವಾ ವಿಳಾಸದಲ್ಲಿ ತಿದ್ದುಪಡಿ ಮಾಡಿಸುವುದು, ಸ್ಥಳಾಂತರಗೊಂಡ ಮತದಾರರ ವಿವರಗಳನ್ನು ನವೀಕರಿಸುವುದು ಹಾಗೂ ಮರಣ ಹೊಂದಿದ ಅಥವಾ ಅರ್ಹತೆ ಕಳೆದುಕೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕಾಗಿದ್ದು, ನಿಖರ ಮತ್ತು ನವೀಕೃತ ಮತದಾರರ ಪಟ್ಟಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪಂಚಾಯತ್ ಭಟ್ಕಳದ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಎಂ, ಯುವಜನರು ಮತದಾರರಾಗಿ ನೋಂದಾಯಿಸಿಕೊಂಡು ಪ್ರಜಾಪ್ರಭುತ್ವದ ಬಲವರ್ಧನೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಪ್ರತಿಯೊಬ್ಬ ಅರ್ಹ ನಾಗರಿಕರೂ SIR ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅಗತ್ಯ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು SVEEP ನೋಡಲ್ ಅಧಿಕಾರಿ ಉದಯ್ ಬೋರಕರ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದ ವಿಸ್ತರಣಾಧಿಕಾರಿ ಶಂಸುದ್ದೀನ್ ಉಪಸ್ಥಿತರಿದ್ದು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು.
ಇದೇ ಅಭಿಯಾನದ ಮುಂದುವರಿದ ಭಾಗವಾಗಿ ಸರ್ಕಾರಿ ಐಟಿಐ ಕಾಲೇಜು, ಭಟ್ಕಳದಲ್ಲಿಯೂ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾಸ್ಟರ್ ಟ್ರೈನರ್ ರಾಘವೇಂದ್ರ ಮಡಿವಾಳ ಅವರು ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ಉದ್ದೇಶ, ಮತದಾರರ ಪಟ್ಟಿಯ ನಿಖರತೆಯ ಮಹತ್ವ, ಯುವ ಮತದಾರರ ಪಾತ್ರ ಹಾಗೂ ಹೊಸ ಮತದಾರರ ನೋಂದಣಿಯಿಂದಾಗುವ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಐಟಿಐ ಕಾಲೇಜಿನ ಅಧಿಕಾರಿ ಪಾಲೇಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕಾರ ನೀಡಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು SIR ಕುರಿತು ಮಾಹಿತಿ ಪಡೆದುಕೊಂಡು, ತಮ್ಮ ಕುಟುಂಬದ ಸದಸ್ಯರು ಹಾಗೂ ಸಾರ್ವಜನಿಕರಿಗೂ ಈ ಅರಿವು ಮೂಡಿಸುವ ಸಂಕಲ್ಪ ವ್ಯಕ್ತಪಡಿಸಿದರು.
ತಾಲೂಕು SVEEP ಸಮಿತಿಯ ಆಶ್ರಯದಲ್ಲಿ ನಡೆದ ಈ ಜಾಗೃತಿ ಕಾರ್ಯಕ್ರಮಗಳು ಯುವ ಸಮುದಾಯದಲ್ಲಿ ಮತದಾರರ ನೋಂದಣಿ, ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ನಾಗರಿಕರ ಜವಾಬ್ದಾರಿಯ ಕುರಿತು ಪರಿಣಾಮಕಾರಿ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿವೆ. ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿಯೂ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ಸಂಖ್ಯೆಯ ಅರ್ಹ ಮತದಾರರನ್ನು SIR ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುವುದು ಎಂದು ತಾಲೂಕು ಆಡಳಿತ ತಿಳಿಸಿದೆ.

