ಮುರ್ಡೇಶ್ವರ: ಚಲಿಸುತ್ತಿದ್ದ ರೈಲಿನಿಂದ ಇಳಿಯುವ ವೇಳೆ ಅಪಾಯಕ್ಕೆ ಸಿಲುಕಿದ್ದ ಯುವ ಪ್ರಯಾಣಿಕನನ್ನು ಕೊಂಕಣ ರೈಲ್ವೆಯ ಮುರ್ಡೇಶ್ವರ ರೈಲು ನಿಲ್ದಾಣದ ಸಿಬ್ಬಂದಿಯೊಬ್ಬರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ. ಅವರ ಸಮಯೋಚಿತ ನಿರ್ಧಾರದಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ.

ಕರ್ತವ್ಯದಲ್ಲಿದ್ದ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ಅವರು ಅಪಾಯದಲ್ಲಿದ್ದ ಪ್ರಯಾಣಿಕನನ್ನು ಸುರಕ್ಷಿತವಾಗಿ ರಕ್ಷಿಸುವ ಮೂಲಕ ಕರ್ತವ್ಯನಿಷ್ಠೆ ಮತ್ತು ಧೈರ್ಯವನ್ನು ಮೆರೆದಿದ್ದಾರೆ.

ಘಟನೆ ಹೇಗೆ ನಡೆಯಿತು?
ಮಾಹಿತಿಯ ಪ್ರಕಾರ, ಬೆಳಗ್ಗೆ ಸುಮಾರು 7:56 ಗಂಟೆಗೆ ಮುರ್ಡೇಶ್ವರ ರೈಲು ನಿಲ್ದಾಣದಿಂದ ರೈಲು ಸಂಖ್ಯೆ 16312 (ಅಪ್) ಹೊರಡುತ್ತಿದ್ದ ಸಂದರ್ಭದಲ್ಲಿ ಮೊಹಮ್ಮದ್ ಗೌಫುರ್ (22) ಎಂಬ ಪ್ರಯಾಣಿಕ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದರು. ಈ ವೇಳೆ ಅವರು ಸಮತೋಲನ ಕಳೆದುಕೊಂಡು ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಅಂತರಕ್ಕೆ ಜಾರುವ ಸ್ಥಿತಿಗೆ ತಲುಪಿದ್ದರು.
ಈ ಅಪಾಯಕಾರಿ ಪರಿಸ್ಥಿತಿಯನ್ನು ಗಮನಿಸಿದ ಗಣಪತಿ ನಾಯ್ಕ್ ಅವರು ಕ್ಷಣಮಾತ್ರವೂ ತಡಮಾಡದೆ ಧಾವಿಸಿ, ಪ್ರಯಾಣಿಕನನ್ನು ಗಟ್ಟಿಯಾಗಿ ಹಿಡಿದು ಸುರಕ್ಷಿತ ಸ್ಥಳಕ್ಕೆ ಎಳೆದರು. ರೈಲು ಸಂಪೂರ್ಣವಾಗಿ ಮುಂದಕ್ಕೆ ಸಾಗುವವರೆಗೆ ಅವರನ್ನು ಭದ್ರವಾಗಿ ಹಿಡಿದಿಟ್ಟಿದ್ದರಿಂದ ಸಂಭವಿಸಬಹುದಾಗಿದ್ದ ಗಂಭೀರ ಅವಘಡ ತಪ್ಪಿತು.
ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ
ಗಣಪತಿ ನಾಯ್ಕ್ ಅವರ ಧೈರ್ಯ, ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆಯನ್ನು ಕೊಂಕಣ ರೈಲ್ವೆ ಆಡಳಿತ ಶ್ಲಾಘಿಸಿದೆ. ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (CMD) ಸಂತೋಷ್ ಕುಮಾರ್ ಝಾ ಅವರು ಅವರ ಸೇವೆಯನ್ನು ಪ್ರಶಂಸಿಸಿ ₹10,000 ನಗದು ಬಹುಮಾನ ಘೋಷಿಸಿದ್ದಾರೆ.
ಈ ಕುರಿತು ಕೊಂಕಣ ರೈಲ್ವೆಯ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಕೆ. ಸುಧಾ ಕೃಷ್ಣಮೂರ್ತಿ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರಿಗೆ ಮನವಿ: ಚಲಿಸುತ್ತಿರುವ ರೈಲಿನಿಂದ ಏರುವುದು ಅಥವಾ ಇಳಿಯುವುದು ಜೀವಕ್ಕೆ ಅಪಾಯಕಾರಿಯಾಗಿದ್ದು, ಪ್ರಯಾಣಿಕರು ರೈಲು ಸಂಪೂರ್ಣವಾಗಿ ನಿಂತ ನಂತರವೇ ಏರಿಳಿಯುವಂತೆ ರೈಲ್ವೆ ಇಲಾಖೆ ಮತ್ತೊಮ್ಮೆ ಮನವಿ ಮಾಡಿದೆ.

