ಭಟ್ಕಳ: ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವಲ್ಲಿ ಯುವಜನರು ಮತ್ತು ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಲ್ಲಿ ಮತದಾರರು ಹಾಗೂ ತಾಲ್ಲೂಕು ಆಡಳಿತದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಮೂಲಕ ಅರ್ಹ ಪ್ರತಿಯೊಬ್ಬ ಮತದಾರನಿಗೂ ನೆರವಾಗಬೇಕು ಎಂದು ಭಟ್ಕಳ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಸುನೀಲ್ ಎಂ. ಕರೆ ನೀಡಿದರು.

ತಾಲ್ಲೂಕು ಸ್ವೀಪ್ ಸಮಿತಿಯ ಆಶ್ರಯದಲ್ಲಿ ಭಟ್ಕಳದಲ್ಲಿ ಆಯೋಜಿಸಲಾದ ವಿದ್ಯಾರ್ಥಿ-ಯುವಜನರ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು. ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಅರ್ಹರಾದ ಯಾರೂ ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಅರ್ಜಿ ನಮೂನೆಗಳನ್ನು ಸರಿಯಾಗಿ ಭರ್ತಿ ಮಾಡಿ ನಿಗದಿತ ಅವಧಿಯೊಳಗೆ ಸಲ್ಲಿಸುವಂತೆ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದರು.
ಜಾಥಾಕ್ಕೆ ಭಟ್ಕಳ ಉಪವಿಭಾಗಾಧಿಕಾರಿ ಮಹೇಶ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಬಳಿಕ ಜಾಥಾದೊಂದಿಗೆ ಹೆಜ್ಜೆ ಹಾಕಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಭಟ್ಕಳ ತಾಲ್ಲೂಕು ಪಂಚಾಯತ್ ಆವರಣದಿಂದ ಆರಂಭವಾದ ಜಾಥಾ ಶಂಶುದ್ದೀನ್ ಸರ್ಕಲ್ ಮಾರ್ಗವಾಗಿ ಸಂಚರಿಸಿ ಅಂಜುಮನ್ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶದೊಂದಿಗೆ ಮುಕ್ತಾಯಗೊಂಡಿತು. ಅಂಜುಮನ್ ಪದವಿ ಕಾಲೇಜು, ಗುರುಸುಧೀಂದ್ರ ಪದವಿಪೂರ್ವ ಕಾಲೇಜು, ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಶೋಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ಮೊಗೇರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಹೆಗಡೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜು ನಾಯ್ಕ, ನಗರಸಭೆ ವ್ಯವಸ್ಥಾಪಕ ವಿ.ಟಿ. ನಾಯ್ಕ, ಪಟ್ಟಣ ಪಂಚಾಯತ್ ಪ್ರತಿನಿಧಿ ನಾರಾಯಣ ನಾಯ್ಕ, ಕಾಲೇಜುಗಳ ಪ್ರಾಂಶುಪಾಲರಾದ ವಿರೇಂದ್ರ ಶಾನುಭಾಗ ಹಾಗೂ ವಿಶ್ವನಾಥ ಪಾಲೇಕರ್, ತಾಲ್ಲೂಕು ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ರಾಜೇಶ್ ಮಹಾಲೆ, ಯೋಜನಾಧಿಕಾರಿ ಹಾಗೂ ತಾಲ್ಲೂಕು ಸ್ವೀಪ್ ನೋಡಲ್ ಅಧಿಕಾರಿ ಹೇಮಾ ನಾಯ್ಕ, ಉದಯ ಬೋರಕರ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕ ಕರಿಯಪ್ಪ ನಾಯ್ಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
