ಶಿರಸಿ: ಹಾವು ಕಚ್ಚಿದ ಬಳಿಕ ಚಿಕಿತ್ಸೆಗಾಗಿ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ ಮಿಥುನ್ ನಾಯ್ಕ್ ಎಂಬ ಬಾಲಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿ, ಮೃತನ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಹಾಗೂ ಆಸ್ಪತ್ರೆಯಲ್ಲಿ 24 ಗಂಟೆಗಳ ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಶೀಘ್ರ ಆರಂಭಿಸಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.

ಈ ಸಂಬಂಧ ಬನವಾಸಿ ಬಿಜೆಪಿ ಮಂಡಲ ಹಾಗೂ ಬಿಜೆಪಿ ರೈತ ಮೋರ್ಚಾ ಉತ್ತರ ಕನ್ನಡ ಜಿಲ್ಲಾ ಘಟಕದ ನೇತೃತ್ವದಲ್ಲಿ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬನವಾಸಿ ಬಿಜೆಪಿ ಮಂಡಲ ಅಧ್ಯಕ್ಷ ರಮೇಶ್ ನಾಯ್ಕ್ ಕುಪ್ಪಳ್ಳಿ, ಬಾಲಕನ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಆರೋಪಿಸಿದರು. ಸರ್ಕಾರ ಅಥವಾ ಸಂಬಂಧಿತ ಇಲಾಖೆ ಮೃತ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರದ ಮೂಲಭೂತ ಸೌಲಭ್ಯಗಳತ್ತ ಹೆಚ್ಚಿನ ಗಮನ ಹರಿಸಬೇಕಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಅನಂತಮೂರ್ತಿ ಮಾತನಾಡಿ, ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಸೇರಿದಂತೆ ಆರೋಗ್ಯ ಸೇವೆಯ ಅವ್ಯವಸ್ಥೆಯನ್ನು ಸರಿಪಡಿಸುವ ಅಗತ್ಯವಿದೆ ಎಂದು ಹೇಳಿದರು. ಮೇಲ್ದರ್ಜೆಗೆ ಏರಿಸಲಾಗಿರುವ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯ ಯಂತ್ರೋಪಕರಣಗಳನ್ನು ತಕ್ಷಣ ಖರೀದಿಸಿ, ಖಾಲಿ ಇರುವ ವೈದ್ಯರು ಹಾಗೂ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಯಾವುದೇ ತುರ್ತು ಚಿಕಿತ್ಸೆಯಲ್ಲಿ ‘ಗೋಲ್ಡನ್ ಅವರ್’ ಅತ್ಯಂತ ಮಹತ್ವದ್ದಾಗಿದ್ದು, ಹಾವು ಕಚ್ಚಿದಂತಹ ಪ್ರಕರಣಗಳಲ್ಲಿ ಸಮಯೋಚಿತ ಚಿಕಿತ್ಸೆ ದೊರಕಬೇಕು. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ಆಸ್ಪತ್ರೆಯಲ್ಲಿ 24×7 ತುರ್ತು ಚಿಕಿತ್ಸಾ ಸೇವೆಯನ್ನು ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಸಿದ್ದಾಪುರ ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಮಾತನಾಡಿ, ಅಗತ್ಯ ಔಷಧಿ ಅಥವಾ ಚಿಕಿತ್ಸಾ ಸೌಲಭ್ಯ ಆಸ್ಪತ್ರೆಯಲ್ಲಿ ಲಭ್ಯವಿರದಿದ್ದರೆ, ರೋಗಿಯನ್ನು ತಕ್ಷಣ ಸೂಕ್ತ ಆಸ್ಪತ್ರೆಗೆ ರವಾನಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು. ಬಡ ಕುಟುಂಬಗಳಿಗೆ ಗುಣಮಟ್ಟದ ಸರ್ಕಾರಿ ಆರೋಗ್ಯ ಸೇವೆ ದೊರಕುವುದು ಸರ್ಕಾರದ ಹೊಣೆಗಾರಿಕೆ ಎಂದರು.
ಬಿಜೆಪಿ ಮುಖಂಡೆ ಸತ್ಯವತಿ ನಾಯ್ಕ್, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ವೈದ್ಯಕೀಯ ಸೇವೆಯ ಗುಣಮಟ್ಟ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಮೃತ ಬಾಲಕನ ತಂದೆ ಪುಟ್ಟಪ್ಪ ನಾಯ್ಕ್ ಮಾತನಾಡಿ, ರಾತ್ರಿ ವೇಳೆ ಮಗ ಹಾಗೂ ಮಗಳಿಗೆ ವಾಂತಿ ಕಾಣಿಸಿಕೊಂಡಿತ್ತು. ಬಳಿಕ ಮನೆಯ ಸಮೀಪ ಹಾವು ಕಂಡುಬಂದ ಹಿನ್ನೆಲೆಯಲ್ಲಿ ಬೆಳಗಿನ ಜಾವ ಆಸ್ಪತ್ರೆಗೆ ಕರೆತಂದೆವು. ವೈದ್ಯರಿಗೆ ಹಾವು ಕಚ್ಚಿರುವ ಅನುಮಾನ ತಿಳಿಸಿದ್ದರೂ ಸೂಕ್ತ ಚಿಕಿತ್ಸೆ ವಿಳಂಬವಾಯಿತು ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಬನವಾಸಿ ಮುಖಂಡ ಯುವರಾಜ ಗೌಡ ಹಾಗೂ ಎಸ್‌ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ನಂದನ್ ಬೋರ್ಕರ್ ಕೂಡ ಆಸ್ಪತ್ರೆಯಲ್ಲಿನ ಮೂಲಸೌಕರ್ಯ ಮತ್ತು ತುರ್ತು ಸೇವೆಗಳನ್ನು ಬಲಪಡಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರೇಮಕುಮಾರ ನಾಯ್ಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ್, ಬನವಾಸಿ ಮಂಡಲದ ಪದಾಧಿಕಾರಿಗಳು, ರೈತ ಮೋರ್ಚಾ ಮುಖಂಡರು ಹಾಗೂ ಬನವಾಸಿ, ಶಿರಸಿ ಮತ್ತು ಸಿದ್ದಾಪುರ ಭಾಗಗಳ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
