ಭಟ್ಕಳ: ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದೀಪಕ್ ನಾಯ್ಕ ಅವರಿಗೆ 2025–26ನೇ ಸಾಲಿನ ಪ್ರತಿಷ್ಠಿತ ಡಿ.ಜಿ.–ಐಜಿಪಿ ಶ್ಲಾಘನಾ ಚಿನ್ನದ ಪದಕ ಲಭಿಸಿದೆ. ಬೆಂಗಳೂರಿನಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಸಮಾರಂಭದಲ್ಲಿ ಅವರು ಈ ಗೌರವವನ್ನು ಸ್ವೀಕರಿಸಿದರು.

ಸಾರ್ವಜನಿಕ ಸೇವೆಯಲ್ಲಿ ತಮ್ಮ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಜನಸ್ನೇಹಿ ನಡೆ-ನುಡಿಗಳ ಮೂಲಕ ಗುರುತಿಸಿಕೊಂಡಿರುವ ದೀಪಕ್ ನಾಯ್ಕ ಅವರು ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸಮರ್ಪಿತ ಸೇವೆ ಸಲ್ಲಿಸುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜತೆಗೆ ಅಪರಾಧ ಪ್ರಕರಣಗಳ ತನಿಖೆ, ಆರೋಪಿಗಳ ಪತ್ತೆ ಹಾಗೂ ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆ ನೀಡುವಲ್ಲಿ ಅವರು ಗಮನಾರ್ಹ ಕಾರ್ಯನಿರ್ವಹಿಸಿದ್ದಾರೆ.
ಅವರ ಸೇವಾ ಮನೋಭಾವ, ಕರ್ತವ್ಯಪ್ರಜ್ಞೆ ಮತ್ತು ಇಲಾಖೆಗೆ ನೀಡಿದ ಮಹತ್ವದ ಕೊಡುಗೆಯನ್ನು ಪರಿಗಣಿಸಿ ರಾಜ್ಯ ಪೊಲೀಸ್ ಇಲಾಖೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ.
ಪದಕ ಪ್ರದಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿದ ದೀಪಕ್ ನಾಯ್ಕ ಅವರ ಸಾಧನೆಗೆ ಪೊಲೀಸ್ ಅಧಿಕಾರಿಗಳು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಈ ಸಾಧನೆ ಭಟ್ಕಳ ಭಾಗಕ್ಕೂ ಹೆಮ್ಮೆಯ ವಿಷಯವಾಗಿದೆ.

