ಭಟ್ಕಳ: ಆನ್‌ಲೈನ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡ ಗ್ರಾಹಕರ ದೂರಿಗೆ ತಕ್ಷಣ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ವಿರುದ್ಧ ಕಾರವಾರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ಆದೇಶ ನೀಡಿದೆ. ವಂಚನೆಗೆ ಒಳಗಾದ ಗ್ರಾಹಕರಿಗೆ ₹20.21 ಲಕ್ಷವನ್ನು ವಾರ್ಷಿಕ ಶೇ. 8ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆಯೋಗ ಸೂಚಿಸಿದೆ.

ಭಟ್ಕಳ ತಾಲ್ಲೂಕಿನ ಬೆಳಕೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಜಗದೀಶ ನಾಯ್ಕ ಅವರು ಕೆನರಾ ಬ್ಯಾಂಕ್‌ನ ಬೆಳಕೆ ಶಾಖೆಯಲ್ಲಿ ಖಾತೆ ಹಾಗೂ ಓವರ್‌ಡ್ರಾಫ್ಟ್ (OD) ಸೌಲಭ್ಯ ಹೊಂದಿದ್ದರು. 2025ರ ಫೆಬ್ರವರಿ 9ರಂದು ತಮ್ಮ ಖಾತೆಯಿಂದ ಅನಧಿಕೃತವಾಗಿ ಹಣ ವರ್ಗಾವಣೆಯಾಗಿರುವ ಕುರಿತು ಮೊಬೈಲ್ ಸಂದೇಶ ಬಂದ ತಕ್ಷಣ ಅವರು ಬ್ಯಾಂಕ್ ಶಾಖೆಗೆ ಮಾಹಿತಿ ನೀಡಿದರು.
ಇದರ ಜೊತೆಗೆ ಬ್ಯಾಂಕ್‌ನ ಕೇಂದ್ರ ಕಚೇರಿ, ಕಾರವಾರ ಪ್ರಾದೇಶಿಕ ಕಚೇರಿ, ರಾಷ್ಟ್ರೀಯ ಸೈಬರ್ ಸಹಾಯವಾಣಿ 1930 ಹಾಗೂ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ದಾಖಲಿಸಿ, ಖಾತೆಯನ್ನು ತಕ್ಷಣ ಫ್ರೀಜ್ ಮಾಡಿ ಹಣವನ್ನು ತಡೆಹಿಡಿಯುವಂತೆ ಮನವಿ ಮಾಡಿದ್ದರು. ಆದಾಗ್ಯೂ, ಅವರ ಖಾತೆಯಿಂದ ಒಟ್ಟು ₹20.21 ಲಕ್ಷ ವಂಚಕರ ಖಾತೆಗೆ ವರ್ಗಾವಣೆಯಾಗಿದೆ.
ನಂತರ ಜಗದೀಶ ನಾಯ್ಕ ಅವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿ, ತಮ್ಮ ದೂರಿನ ಬಳಿಕವೂ ಬ್ಯಾಂಕ್ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ವಂಚನೆಗೆ ಒಳಗಾದ ಹಣವನ್ನು ಮರಳಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಬ್ಯಾಂಕ್ ವಿಫಲವಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಕರಣದ ವಿಚಾರಣೆಯ ವೇಳೆ ಕೆನರಾ ಬ್ಯಾಂಕ್ ಪರವಾಗಿ, ಗ್ರಾಹಕರೇ ತಮ್ಮ ಇಂಟರ್‌ನೆಟ್ ಬ್ಯಾಂಕಿಂಗ್ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ರಚಿಸಿಕೊಂಡಿದ್ದು, ವಂಚನೆಗೆ ಎರಡು ದಿನಗಳ ಮುನ್ನ ಅವುಗಳನ್ನು ಬದಲಿಸಿದ್ದರು ಎಂದು ವಾದಿಸಲಾಯಿತು. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿ (OTP) ಬಳಸಿ ಅಧಿಕೃತ ವಹಿವಾಟು ನಡೆದಿದ್ದು, ಬ್ಯಾಂಕ್ ವ್ಯವಸ್ಥೆಯಲ್ಲಿ ಯಾವುದೇ ಭದ್ರತಾ ಲೋಪ ಅಥವಾ ಖಾತೆ ಹ್ಯಾಕ್ ಆದ ಸಾಕ್ಷ್ಯಗಳಿಲ್ಲ ಎಂದು ಬ್ಯಾಂಕ್ ತಿಳಿಸಿತು.
ಆದರೆ, ಗ್ರಾಹಕರು ವಂಚನೆ ಕುರಿತು ತಕ್ಷಣ ಮಾಹಿತಿ ನೀಡಿದ ಬಳಿಕವೂ ಹಣದ ವರ್ಗಾವಣೆಯನ್ನು ತಡೆಯಲು ಅಥವಾ ಮಧ್ಯವರ್ತಿ ಬ್ಯಾಂಕ್ ಮೂಲಕ ಹಣವನ್ನು ಮರುಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಅಂಶವನ್ನು ಆಯೋಗ ಗಂಭೀರವಾಗಿ ಪರಿಗಣಿಸಿತು.
ಆಯೋಗದ ಅಭಿಪ್ರಾಯದಲ್ಲಿ, ವಂಚನೆ ಸಂಭವಿಸುವ ಮೊದಲು ಬ್ಯಾಂಕ್‌ನಿಂದ ಯಾವುದೇ ನಿರ್ಲಕ್ಷ್ಯ ನಡೆದಿಲ್ಲ. ಆದರೆ, ದೂರು ಬಂದ ನಂತರ ತಕ್ಷಣ ಸ್ಪಂದಿಸದೇ ವಿಳಂಬ ಮಾಡಿರುವುದು ಸೇವಾ ಲೋಪಕ್ಕೆ ಸಮಾನವಾಗಿದೆ. ಗ್ರಾಹಕರ ಖಾತೆಯನ್ನು ತಕ್ಷಣ ಫ್ರೀಜ್ ಮಾಡಿ ಅಗತ್ಯ ಕ್ರಮ ಕೈಗೊಂಡಿದ್ದರೆ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಇತ್ತು ಎಂದು ಆಯೋಗ ಹೇಳಿದೆ.
ಕಾರವಾರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಾರುತಿ ವಡ್ಡರ್ ಹಾಗೂ ಸದಸ್ಯೆ ನಯನಾ ಕಾಮಟೆ ಪ್ರಕರಣದ ದಾಖಲೆಗಳು ಮತ್ತು ಎರಡೂ ಪಕ್ಷಗಳ ವಾದಗಳನ್ನು ಪರಿಶೀಲಿಸಿದ ಬಳಿಕ, ಬೆಳಕೆ ಶಾಖೆಯ ಬ್ಯಾಂಕ್ ಮ್ಯಾನೇಜರ್ ಹಾಗೂ ಕಾರವಾರ ಪ್ರಾದೇಶಿಕ ಮ್ಯಾನೇಜರ್ ಜಂಟಿಯಾಗಿ ₹20.21 ಲಕ್ಷವನ್ನು ವಾರ್ಷಿಕ ಶೇ. 8ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶಿಸಿದರು.ಇದರ ಜೊತೆಗೆ, ಮಾನಸಿಕ ಹಿಂಸೆ ಮತ್ತು ತೊಂದರೆಗೆ ಪರಿಹಾರವಾಗಿ ₹25,000 ಹಾಗೂ ಪ್ರಕರಣದ ವೆಚ್ಚಕ್ಕಾಗಿ ₹10,000ವನ್ನು ಸಹ ಜಗದೀಶ ನಾಯ್ಕ ಅವರಿಗೆ ಪಾವತಿಸುವಂತೆ ಆಯೋಗ ನಿರ್ದೇಶನ ನೀಡಿದೆ.

